Monday, September 25, 2023

Latest Posts

ಗತಿಶಕ್ತಿ ಕಾರ್ಯಕ್ರಮದ ಮೂಲಕ ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಶಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಗತಿಶಕ್ತಿ ಕಾರ್ಯಕ್ರಮದ ಮೂಲಕ ದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಶಕೆಯ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಇಂದು ಪಿಎಂ ಗತಿ ಶಕ್ತಿ ಯೋಜನೆಯ ದಕ್ಷಿಣ ವಲಯ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು, ಗತಿ ಶಕ್ತಿ ಯೋಜನೆ ರಾಷ್ಟ್ರ ನಿರ್ಮಾಣದ ದೂರದೃಷ್ಟಿಯಿಂದ ರೂಪಿತವಾದ ಕಾರ್ಯಕ್ರಮ. ಸಮಸ್ಯೆಗಳನ್ನು ಬಗೆಹರಿಸಲು ಒಟ್ಟಾಗಿ ಕೆಲಸ ಮಾಡುವ, ಒಂದೇ ಗುರಿಯತ್ತ ಸಾಗಲು, ದೇಶ ಕಟ್ಟುವ ಕಾಯಕಕ್ಕೆ ಅನುಕೂಲವಾಗುವ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಹಾಗೂ ಕೊರತೆ ನಿಗಿಸಲು ಇರುವ ಸಾಧನ. ಈ ಬಹು ಉದ್ದೇಶಗಳನ್ನು ಹೊಂದಿರುವ ಗತಿ ಶಕ್ತಿ ಯೋಜನೆ, ನಮ್ಮ ಪ್ರಧಾನ ಮಂತ್ರಿಗಳ ಕನಸಿನ ಕೂಸು. ಪ್ರಧಾನಮಂತ್ರಿ ಹಾಗೂ ಮುಖ್ಯ ಮಂತ್ರಿಯಾಗಿ ಕೆಲಸ ಮಾಡಿರುವ ಅವರ ಅನುಭವವು ಭಾರತ ಸರಕಾರ ಹಾಗೂ ರಾಜ್ಯಗಳ ಬೃಹತ್ ಯೋಜನೆಗಳನ್ನು ಸಾಧಿಸಲು ಸಮನ್ವಯ ಹಾಗೂ ಸಹಕಾರ ನೀಡಲು ಸೂಕ್ತ ಸಮಯ ಇದಾಗಿದೆ ಎನ್ನುವುದನ್ನು ನಿರೂಪಿಸಿದೆ ಎಂದರು.

ರಸ್ತೆ ಸಾರಿಗೆಯಲ್ಲಿ ಗತಿ ಮತ್ತು ಶಕ್ತಿ ಎರಡನ್ನೂ ಸಾಧಿಸಿರುವ ಕೇಂದ್ರ ರಸ್ತೆ ಸಾರಿಗೆ ಸಚಿವರು, ರಾಷ್ಟ್ರೀಯ ಹೆದ್ದಾರಿಗಳನ್ನು ಕಳೆದ 7ವರ್ಷಗಳಲ್ಲಿ ಹತ್ತು ಪಟ್ಟು ಹೆಚ್ಚಿಸಿದ್ದಾರೆ. ಅವರು ರಾಷ್ಟ್ರೀಯ ಹೆದ್ದಾರಿ ಕೇವಲ ರಸ್ತೆ ಸಾರಿಗೆ ಮತ್ತು ಲಾಜಿಸ್ಟಿಕ್‌ಗಳಿಗೆ ಮಾತ್ರ ಸೀಮಿತವಾಗಿರದೆ, ರಾಷ್ಟ್ರೀಯ ಅಭಿವೃದ್ಧಿಯನ್ನು ಸಾಧ್ಯವಾಗಿಸಬಲ್ಲದು ಎಂದು ತೋರಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕರ್ನಾಟಕ ಅಭಿವೃದ್ಧಿಯಲ್ಲಿ ಮುಂಚೂಣಿ:
ಕರ್ನಾಟಕ ರಾಜ್ಯ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಐತಿಹಾಸಿಕವಾಗಿ ರಾಜ್ಯ ಮೊದಲಿನಿಂದಲೂ ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಹೊಂದಿದ್ದು, ಭಾರತ ಸರಕಾರ ಹಾಗೂ ಅಂತರ ರಾಜ್ಯ ಸಹಕಾರದಲ್ಲಿ ಕರ್ನಾಟಕ ಸದಾ ಸಮನ್ವಯ ಸಾಧಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಯನ್ನು ಸ್ಥಾಪಿಸಿದ ಮೊದಲ ರಾಜ್ಯ ಕರ್ನಾಟಕ. ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲಾ ಅಂಶಗಳೂ ರಾಜ್ಯದಲ್ಲಿದ್ದು, ರಸ್ತೆ, ರೈಲ್ವೆ, ಬಂದರುಗಳನ್ನು ಅಭಿವೃದ್ಧಿ ಪಡಿಸಲಾಗಿದೆ. 5 ವಿಮಾನ ನಿಲ್ದಾಣಗಳು, ಒಳನಾಡು ಜಲಸಾರಿಗೆ, ಕೆ- ರೈಡ್ ಮುಂತಾದವುಗಳನ್ನು ಹೊಂದಿದೆ. ರೈಲು ಉತ್ಪಾದನೆಯಯಲ್ಲಿ 50:50 ಪಾಲುದಾರಿಕೆಯನ್ನು ಹೊಂದಿದ ಮೊದಲ ರಾಜ್ಯ ಎಂದರು.

ಕಾನೂನು ಸರಳೀಕರಿಸಲು ಮನವಿ:
ಕೇಂದ್ರ ಸರಕಾರದ ಮಟ್ಟದಲ್ಲಿ ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಗಮನ ಸೆಳೆದ ಸಿಎಂ, ಪರಿಸರ ಹಾಗೂ ಅರಣ್ಯ ಇಲಾಖೆ ಅನುಮೋದನೆಗಳು, ಆರ್ಥಿಕ ವಲಯದಲ್ಲಿ ಕೆಲವು ಕಾನೂನುಗಳನ್ನು ಸರಳೀಕರಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆಯನ್ನು ಆಕರ್ಷಿಸಲು ಸಾಧ್ಯ. ಅಂತರ್ ರಾಜ್ಯ ಜಲ ವಿವಾದಗಳಿಂದ ನೀರಾವರಿ ಯೋಜನೆಗಳಲ್ಲಿ ವಿಳಂಬವಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾನೂನು ಮಧ್ಯಸ್ಥಿಕೆಗಳ ಅಗತ್ಯವೂ ಇದ್ದು, ಇವುಗಳ ಬಗ್ಗೆ ಮತ್ತೊಮ್ಮೆ ಗಮನಹರಿಸಬೇಕು ಎಂದರು.

ದೇಶಕ್ಕೊಂದೇ ಸಿಆರ್‌ಝಡ್ ಕಾನೂನಿರಲಿ:
ರೈಲ್ವೆ ಯೋಜನೆಗಳಿಗೆ ಭೂ ಸ್ವಾಧೀನ ಹಾಗೂ ಬಂಡವಾಳ ಮೂಲಕ ರಾಜ್ಯ ಸರಕಾರ ಸಹಕಾರ ನೀಡುತ್ತಿದ್ದು, ಈ ಯೋಜನೆಗಳ ಶೀಘ್ರವಾಗಿ ಪೂರ್ಣಗೊಳಿಸಬೇಕಿದೆ. ಬೆಂಗಳೂರು-ಮೈಸೂರು-ಹೈದರಾಬಾದ್‌ಗೆ ಹೈಸ್ಪೀಡ್ ರೈಲು ಪ್ರಮುಖ ಯೋಜನೆಯಾಗಿದೆ. 453 ಕಿಮೀ.ಉದ್ದದ ಈ ಯೋಜನೆಯನ್ನು ಮೇಲ್ದರ್ಜೆಗೇರಿಸುವುದರಿಂದ ಎರಡೂ ರಾಜ್ಯಗಳ ನಡುವಿನ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕರ್ನಾಟಕ ರಾಜ್ಯದಲ್ಲಿ 330 ಕಿ.ಮೀ. ಕರಾವಳಿ ಇದೆ. ಅಲ್ಲಿ ಬಂದರುಗಳ ನಿರ್ಮಾಣ, ವಾಣಿಜ್ಯೋದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇದಕ್ಕಾಗಿ ಈಗಿರುವ ಸಿಆರ್‌ಝಡ್ ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆ. ಇಡೀ ದೇಶಕ್ಕೆ ಒಂದೇ ಸಿಆರ್‌ಝಡ್ ಕಾನೂನು ತರುವುದು ಸೂಕ್ತ ಎಂಬ ಅಭಿಪ್ರಾಯವನ್ನು ಸಿಎಂ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!