ದಾರಿಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಕುಖ್ಯಾತ ಗ್ಯಾಂಗ್‌ ಅಂದರ್

ಹೊಸದಿಗಂತ ವರದಿ ವಿಜಯಪುರ:
ದಾರಿ ಹೋಕರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ 7 ಮಂದಿ ದರೋಡೆಕೋರರ ಗ್ಯಾಂಗ್‌ಅನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ ಹೊರ ವಲಯದ ಇಟ್ಟಂಗಿಹಾಳ ದೊಡ್ಡಿಯ ವಿಜು ಉರ್ಫ್ ವಿಜಯ ಬೀರಪ್ಪ ಕರಾಡೆ (23), ಆನಂದ ಮಾಯಪ್ಪ ಢೇರೆ (22), ಬಬಲಾದಿ ಕರೆವಾಡಿಯ ಸಚಿನ್ ಮಧು ಗೋಪಣೆ (20), ತಿಕ್ಕುಂಡಿ ಕರೆವಾಡಿಯ ನವನಾಥ ಅಮಗೊಂಡ ಕರಾಡೆ (20), ಸಚಿನ್ ವಿಲಾಸ ಕಾಳೆ (21), ವಿಕಾಸ ಲಕ್ಷ್ಮಣ ಢಾಣೆ (20), ಹಣಮಂತ ಜಯಪ್ಪ ಖರಾತ (20) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.
ಈ ಆರೋಪಿಗಳು ನಗರ ಹೊರ ವಲಯ ಇಟ್ಟಂಗಿಹಾಳ ಕ್ರಾಸ್ ಬಳಿ ಹಾಗೂ ಹಂಚನಾಳ ತಾಂಡಾ ರಸ್ತೆಯಲ್ಲಿ ಮಚ್ಚು, ಬಡಿಗೆ, ಕುಡಗೋಲು, ವಾಯರ್, ಪೈಪ್ ಹಾಗೂ ಖಾರದ ಪುಡಿ ಹಿಡಿದು ನಿಂತು, ದಾರಿ ಹೋಕರನ್ನು ಬೇದರಿಸಿ, ದರೋಡೆ ಮಾಡಿರುವ ಬಗ್ಗೆ ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿತ್ತು. ಈ ಪ್ರಕರಣಕ್ಕೆ ವಿಶೇಷ ತಂಡ ರಚಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಬಂಧಿತ ಆರೋಪಿಗಳಿಂದ ದರೋಡೆ ಮಾಡಿದ 28,000 ರೂ.ಗಳ ಮೌಲ್ಯದ 2 ಮೊಬೈಲ್, 2,500 ರೂ.ಗಳ ಮೌಲ್ಯದ 1 ಕೈ ಗಡಿಯಾರ, 8,200 ರೂ. ನಗದು ಸೇರಿ ದರೋಡೆಗೆ ಉಪಯೋಗಿಸಿದ 4,75,000 ಮೌಲ್ಯದ 5 ಬೈಕ್ ಸೇರಿದಂತೆ ಒಟ್ಟು 5,13,000 ರೂ.ಗಳ ಕಿಮ್ಮತ್ತಿನ ವಸ್ತು ಹಾಗೂ ಹಣವನ್ನು ಜಪ್ತಿ ಮಾಡಲಾಗಿದೆ ಎಂದರು.
ಈ ಪ್ರಕರಣ ಭೇದಿಸಲು ಎಸ್ಪಿ ಎಚ್.ಡಿ. ಆನಂದಕುಮಾರ, ಎಎಸ್ಪಿ ಡಾ.ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಸಿದ್ದೇಶ್ವರ, ಸಿಪಿಐ ಸಂಗಮೇಶ ಪಾಲಭಾವಿ, ಪಿಎಸ್‌ಐಗಳಾದ ಜಿ.ಎಸ್. ಉಪ್ಪಾರ, ಆರ್.ಎ. ದಿನ್ನಿ ಹಾಗೂ ಸಿಬ್ಬಂದಿ ಎಂ.ಎನ್. ಮುಜಾವರ, ಐ.ವೈ. ದಳವಾಯಿ, ಗುರು ಪಡಪದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದರು.

ಡಿವೈಎಸ್‌ಪಿ ಸಿದ್ದೇಶ್ವರ, ಸಿಪಿಐ ಸಂಗಮೇಶ ಪಾಲಭಾವಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!