ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಬ್ರಿಡ್ಜ್‌ನ ಸಿಮೆಂಟ್ ತುಂಡು ಬಿದ್ದ ಪರಿಣಾಮ ಕಾರಿನ ಗಾಜು ಒಡೆದು ಹೋಗಿದ್ದು, ಒಳಗಿದ್ದವರು ಅಪಾಯದಿಂದ ಪಾರಾಗಿರುವ ಘಟನೆ ನಗರದ ಮೈಸೂರು ರಸ್ತೆಯಲ್ಲಿ ನಡೆದಿದೆ.
ನಮ್ಮ ಮೆಟ್ರೋದಲ್ಲೂ ಅನೇಕ ಅವಘಡಗಳು ನಡೆಯುತ್ತಲೇ ಇದ್ದು, ಇದೀಗ ಮತ್ತೊಂದು ಘಟನೆ ಸಂಭವಿಸಿದೆ. ಬೆಳಗ್ಗೆ ಮೈಸೂರು ರಸ್ತೆಯ ಬಳಿ ಮೆಟ್ರೋ ಬ್ರಿಡ್ಜ್‌ನಿಂದ ಸಿಮೆಂಟಿನ ಕಲ್ಲು ಕಳಚಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಬಿದ್ದ ಪರಿಣಾಮ ಕಾರಿನ ಮುಂಭಾಗದ ಗಾಜುಪುಡಿಯಾಗಿದೆ. ಕಾರಿನ ಮಾಲೀಕ ನಮ್ಮ ಮೆಟ್ರೋ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಲಹಂಕದ ಬಾಗಲೂರಿನಿಂದ ಮೈಸೂರಿಗೆ ಕಾರ್ಯಕ್ರಮಕ್ಕೆ ನವೀನ್ ರಾಜ್ ಮತ್ತು ಕುಟುಂಬ ಹೋಗುತ್ತಿದ್ದಾಗ ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393 ಬಳಿ ಈ ಘಟನೆ ನಡೆದಿದೆ. ಮೆಟ್ರೋ ರೈಲು ಹೋಗುತ್ತಿದ್ದಂತೆ ಅಲ್ಲಿನ ವೈಬ್ರೇಷನ್‌ಗೆ ಸಿಮೆಂಟ್ ಕಳಚಿ ಬಿದ್ದಿದೆ. ಖರೀದಿಸಿ ಒಂದು ತಿಂಗಳು ಕೂಡ ಆಗದ ಎಸ್‌ಯುವಿ 700 ಕಾರಿನ ಮುಂದಿನ ಗ್ಲಾಸ್ ಒಡೆದಿದ್ದು, ಕಾರಿನ ಮೇಲ್ಭಾಗ ಹಾನಿಯಾಗಿದೆ. ಕಲ್ಲು ಬಿದ್ದ ರಭಸಕ್ಕೆ ಕಾರಿನಲ್ಲಿದ್ದವರು ಭಯಗೊಂಡಿದ್ದಾದರೂ ಪಾರಾಗಿದ್ದಾರೆ.
ಪರಿಹಾರ ಬೇಕು ಎಂದು ನವೀನ್ ರಾಜ್ ಆಗ್ರಹಿಸಿ ದೂರು ನೀಡಿದ್ದಾರೆ. ಮೆಟ್ರೋ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಕಾರು ಮಾಲೀಕನಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ. ಆದರೆ ಈ ರೀತಿ ಕಲ್ಲು ಯಾರದ್ದಾದರೂ ತಲೆ ಮೇಲೆ ಬಿದ್ದರೆ ಅದಕ್ಕೆ ಯಾರು ಹೊಣೆ? ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಕಾರು ಮಾಲೀಕ ಆಗ್ರಹಿಸಿದ್ದಾರೆ.