ಬಿಪಿ ಲೋ ಆಗಿ ಮರದಿಂದ ಬಿದ್ದು ಪೊಲೀಸ್ ಸಿಬ್ಬಂದಿ ಸಾವು

ಹೊಸದಿಗಂತ ವರದಿ,ಮಡಿಕೇರಿ:

ಪೊಲೀಸ್ ಸಿಬ್ಬಂದಿಯೊಬ್ಬರು ಕಡಿಮೆ ರಕ್ತದೊತ್ತಡದಿಂದಾಗಿ ಮರದಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪ ಸಮೀಪದ ಕಾನ್’ಬೈಲ್ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಸಿಬ್ಬಂದಿ, ಮಡಿಕೇರಿ‌ ಕ್ಷೇತ್ರದ ಶಾಸಕರಾಗಿದ್ದ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಕಳೆದ 15 ವರ್ಷಗಳಿಗೂ ಅಧಿಕ ಕಾಲ ಅಂಗರಕ್ಷಕರಾಗಿದ್ದ ಲೋಕೇಶ್ ಪೂಜಾರಿ (38) ಮೃತಪಟ್ಟವರು.

ಭಾನುವಾರವಾಗಿದ್ದ ಕಾರಣ ಮನೆಯಲ್ಲೇ ಇದ್ದ ಲೋಕೇಶ್, ಮನೆಯ ಸಮೀಪದಲ್ಲಿದ್ದ ತೋಟಕ್ಕೆ ತೆರಳಿ ಸುಮಾರು 40 ಅಡಿ ಎತ್ತರದ ಮಾವಿನ ಮರಕ್ಕೆ ಹತ್ತಿ ಕಪಾತ್ ಮಾಡಲು ಮುಂದಾಗಿದ್ದರು.

ಈ ಸಂದರ್ಭ ಬಿಪಿ ಲೋ ಆಗಿದ್ದು, ತಮ್ಮೊಂದಿಗಿದ್ದ ಸಹೋದರನ ಬಳಿ ‘ಶುಗರ್ ಲೆವೆಲ್ ಡೌನ್ ಆಗುತ್ತಿದೆ. ಮನೆಗೆ ಹೋಗಿ ಸ್ವಲ್ಪ ಸಕ್ಕರೆ ತಂದುಕೊಡು’ಎಂದು ಸೂಚಿಸಿದ್ದಾರೆ. ಸಹೋದರ ಮನೆಗೆ ತೆರಳಿ ಸಕ್ಕರೆ ತರುವಷ್ಟರಲ್ಲಿ ಲೋಕೇಶ್ ಮರದಿಂದ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಇವರ ಕೈ ಮತ್ತು ಕಾಲಿನ ಮೂಳೆ ಮುರಿದಿದೆ. ತಕ್ಷಣವೇ ಇವರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗಮಧ್ಯೆ ಲೋಕೇಶ್ ಕೊನೆಯಿಸಿರೆಳೆದಿದ್ದಾರೆ. ಕಡಿಮೆ ರಕ್ತದೊತ್ತಡದಿಂದಾಗಿ ಅವರು ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಗಣ್ಯರ ಕಂಬನಿ: ಲೋಕೇಶ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರಗೆ ಧಾವಿಸಿದ ಮಾಜಿ‌ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಕೆ.ಜಿ.ಬೋಪಯ್ಯ ಅವರು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರಾದರೂ, ತನ್ನ ಪರಮಾಪ್ತನಾಗಿದ್ದ ಲೋಕೇಶ್ ಅವರೊಂದಿಗಿನ ಒಡನಾಟವನ್ನು ನೆನೆದು ಅಪ್ಪಚ್ಚುರಂಜನ್ ಕಣ್ಣೀರು ಸುರಿಸಿದರು.

‘ಲೋಕೇಶ್ ಬಹಳ ಬುದ್ದಿವಂತರಾಗಿದ್ದರು. 2018ರ ಭೂಕುಸಿತದ ಸಂದರ್ಭ ಮುನ್ನುಗ್ಗುತ್ತಾ ಸಾಗುತ್ತಿದ್ದರು. ಮೊದಲು ವಿಕೋಪದ ಸ್ಥಳಕ್ಕೆ ಹೆಜ್ಜೆ ಹಾಕಿ ನಂತರ ಸುರಕ್ಷಿತ ಎಂದು ಅರಿತ ಬಳಿಕವೇ ನನ್ನನ್ನು ಬರಲು ಹೇಳುತ್ತಿದ್ದರು. ಇದೀಗ ಮರ ಕಪಾತ್ ಮಾಡಲು ಹೋಗಿ ಲೋಕೇಶ್ ನಮ್ಮನ್ನಗಲಿದ್ದಾರೆ’ ಎಂದು ಲೋಕೇಶ್ ನೆನಪಿನಲ್ಲಿ ಅಪ್ಪಚ್ಚು ರಂಜನ್ ಗದ್ಗದಿತರಾದರು.

ಲೋಕೇಶ್ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಲೋ ಬಿಪಿಯಿಂದ ಮರದ ಮೇಲಿನಿಂದ ಬಿದ್ದು ಪ್ರಾಣ ಕಳೆದುಕೊಂಡರು. ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ ಎಂದು ಕೆ.ಜಿ.ಬೋಪಯ್ಯ ಸಂತಾಪ ವ್ಯಕ್ತಪಡಿಸಿದರು.
ಮಡಿಕೇರಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಲೋಕೇಶ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಬೋಪಯ್ಯ, ಲೋಕೇಶ್ ರಂಜನ್ ಅವರ ಕುಟುಂಬದ ಸದಸ್ಯನಂತಿದ್ದ ಲೋಕೇಶ್ ಅಗಲಿಕೆಯ ನೋವಿನಿಂದ ಅಳುತ್ತಿದ್ದ ರಂಜನ್ ಅವರನ್ನು ಬೋಪಯ್ಯ ಸಂತೈಸಿದರು.
ಜನಾನುರಾಗಿಯಾಗಿದ್ದ ಲೋಕೇಶ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪಕ್ಷಬೇಧ ಮರೆತು ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರು, ಪೊಲೀಸ್ ಸಹೋದ್ಯೋಗಿಗಳು, ಗೆಳೆಯರು ಆಗಮಿಸುತ್ತಿದ್ದುದು ಕಂಡು ಬಂದಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!