ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದರೂ, ಭಾರತೀಯ ಬ್ಯಾಟರ್‌ಗಳ ಭರ್ಜರಿ ಪ್ರದರ್ಶನದಿಂದಾಗಿ ಈ ಪಂದ್ಯ ಇತಿಹಾಸದ ಪುಟ ಸೇರಿದೆ. ಮೊದಲ ಇನಿಂಗ್ಸ್‌ನಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ ಆಟಗಾರರು ನಿರ್ಮಿಸಿದ ಪ್ರಮುಖ ದಾಖಲೆಗಳು ಇಲ್ಲಿವೆ:
ಇತಿಹಾಸ ನಿರ್ಮಿಸಿದ ನಾಯಕ ಶ್ರೇಯಸ್ ಅಯ್ಯರ್
ಜವಾಬ್ದಾರಿಯುತ ಆಟವಾಡಿದ ನಾಯಕ ಶ್ರೇಯಸ್ ಅಯ್ಯರ್ 47 ಎಸೆತಗಳಲ್ಲಿ 68 ರನ್ ಚಚ್ಚಿದರು. ಈ ಮೂಲಕ ಇಂಗ್ಲೆಂಡ್ ನೆಲದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ಭಾರತದ ಮೊದಲ ನಾಯಕ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಭಿಷೇಕ್ ಶರ್ಮಾ ಸ್ಫೋಟಕ ಫಿಫ್ಟಿ
ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಬ್ಬರಿಸಿದರು. ಅಂತಾರಾಷ್ಟ್ರೀಯ ಟಿ20ಯಲ್ಲಿ 5 ಬಾರಿ 20 ಅಥವಾ ಅದಕ್ಕಿಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವಿಶ್ವದ ಮೊದಲ ಐಸಿಸಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರದ ಬ್ಯಾಟರ್ ಎಂಬ ಕೀರ್ತಿ ಇವರದ್ದಾಗಿದೆ.
ಅತಿ ವೇಗದ 100 ಸಿಕ್ಸರ್ ವಿಶ್ವ ದಾಖಲೆ
ಈ ಪಂದ್ಯದಲ್ಲಿ 4 ಸಿಕ್ಸರ್ ಸಿಡಿಸುವ ಮೂಲಕ ಅಭಿಷೇಕ್ ಟಿ20ಯಲ್ಲಿ 100 ಸಿಕ್ಸರ್‌ಗಳ ಮೈಲಿಗಲ್ಲು ತಲುಪಿದರು. ಕೇವಲ 785 ಎಸೆತಗಳಲ್ಲಿ ಈ ಸಾಧನೆ ಮಾಡುವ ಮೂಲಕ, ವೆಸ್ಟ್ ಇಂಡೀಸ್‌ನ ಎವಿನ್ ಲೂಯಿಸ್ (789 ಎಸೆತ) ಅವರ ವಿಶ್ವ ದಾಖಲೆಯನ್ನು ಮುರಿದರು.
ಸ್ಟ್ರೈಕ್ ರೇಟ್ ಸರದಾರ
245.83ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಅಭಿಷೇಕ್, 200+ ಸ್ಟ್ರೈಕ್ ರೇಟ್‌ನಲ್ಲಿ ಅತಿ ಹೆಚ್ಚು ಫಿಫ್ಟಿ ಬಾರಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ (13 ಫಿಫ್ಟಿ) ಮೊದಲ ಸ್ಥಾನದಲ್ಲಿದ್ದರೆ, ಅಭಿಷೇಕ್ (9 ಫಿಫ್ಟಿ) ದ್ವಿತೀಯ ಸ್ಥಾನದಲ್ಲಿದ್ದಾರೆ.



