ಹೊಸ ದಿಗಂತ ಡಿಜಿಟಲ್ ಡೆಸ್ಕ್ , ಮಂಗಳೂರು:
ಹಿಂದುತ್ವದ ಕುರಿತು ಸಂಶೋಧಕ ದೃಷ್ಟಿಯಿಂದ ಅಧ್ಯಯನ ಅಗತ್ಯ, ಹಿಂದುತ್ವದಲ್ಲಿ ಜಗತ್ತಿನ ಸಾವಿರಾರು ಸಮಸ್ಯೆಗಳಿಗೆ ಪರಿಹಾರ ಅಡಗಿದೆ ಎಂದು ಮಂಗಳೂರು ವಿಭಾಗದ ಸಾಮರಸ್ಯ ವೇದಿಕೆಯ ಸಂಯೋಜಕ ರವೀಂದ್ರ ಪುತ್ತೂರು ಹೇಳಿದರು.
ಶನಿವಾರ ಸುರತ್ಕಲ್ ಗೋವಿಂದದಾಸ ಪದವಿ ಕಾಲೇಜಿನಲ್ಲಿ ಮಂಥನ ವೈಚಾರಿಕ ವೇದಿಕೆಯ, ಮಾಸಿಕ ವೈಚಾರಿಕ ಘೋಷ್ಟಿಯದ “ಮಂಥನ” ಕಾರ್ಯಕ್ರಮದಲ್ಲಿ “ಹಿಂದುತ್ವ ಮತ್ತು ಭಾರತೀಯ ಜೀವನ ದೃಷ್ಟಿ” ಎಂಬ ವಿಷಯದ ಕುರಿತು ಮಾತನಾಡಿದ ಅವರು, ಭಾರತದಲ್ಲಿ ಸುಮಾರು 150 ವರ್ಷಗಳಿಂದ ಅಪಾರ್ಥಕ್ಕೆ ಒಳಗಾದ ವಿಷಯ ಹಿಂದುತ್ವ. ಇಂದಿಗೂ ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಗೊಳಗಾಗಿರುವ ವಿಷಯ ಎಂದರೆ ಅದು ಹಿಂದೂ, ಹಿಂದುತ್ವ, ಸನಾತನ. ಇಂದು ಇಡೀ ಪ್ರಪಂಚವೇ ಇದೇ ವಿಷಯವಾಗಿ ಭಾರತದ ಕಡೆ ತಿರುಗಿ ನೋಡುವಂತೆ, ಗೌರವಿಸುವಂತೆ ಮಾಡಿದೆ. ಭಾರತದ ಸಂಸ್ಕೃತಿಯ ಲವಶೇಷವು ಕೂಡ ತಿಳಿಯದವರು ದೇಶವನ್ನು ಆಳಿದ ಪರಿಸ್ಥಿತಿಯಿಂದ ನಮ್ಮ ಭಾರತೀಯ ಸಂಸ್ಕೃತಿಯ ಅರಿವು ಜನಸಾಮಾನ್ಯರಿಗೆ ತಲುಪುವಲ್ಲಿ ವಿಫಲವಾಗಿದೆ.
ಜೀವನದ ಉದ್ದೇಶ, ಸ್ಪಷ್ಟೀಕರಣ ಕೊಡುವುದು ಧರ್ಮ. ನಮ್ಮತನವನ್ನು, ಚಾರಿತ್ರ್ಯತೆ ಪರಿಚಯ ಮಾಡುವುದೆ ಧರ್ಮ ಹಾಗಾಗಿ ಧರ್ಮದ ಮೂಲ ಚಿಂತನೆ ಜೀವನದ ಸ್ಪಷ್ಟೀಕರಣವಾಗಿದೆ.
ಇಂಗ್ಲಿಷ್ ಶಿಕ್ಷಣ ಪದ್ಧತಿಯಿಂದ ಧರ್ಮ ಮತ್ತು ರಿಲಿಜಿಯನ್ ಎರಡು ಕೂಡ ಒಂದೇ ಎಂಬ ಭಾವನೆಯನ್ನು ತಂದಿಡುವಂತೆ ಮಾಡಿದೆ ಆದರೆ ಧರ್ಮ ಜೀವನದ ವಿಧಾನ, ರಿಲಿಜಿಯನ್ ಒಂದು ವಯಕ್ತಿಕ ವಿಷಯ ಮತ್ತು ಅದು ಪೂಜಾ ವಿಧಾನಕ್ಕೆ ಸಂಬಂಧಿಸಿದ್ದು. ಹಾಗಾಗಿ ನಾವು ಪರಸ್ಪರ ವಿಷಯವನ್ನು ತಿಳಿಯುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ನಮ್ಮ ಜೀವನದಲ್ಲಿ ಧರ್ಮ, ಅರ್ಥ, ಕಾಮ,ಮೋಕ್ಷ ಇವುಗಳು ಪ್ರಧಾನವಾದ ಪಾತ್ರವನ್ನು ನೀಡುತ್ತದೆ. ಆದರೆ ಅರ್ಥ ಮತ್ತು ಕಾಮದ ಬಯಕೆ ಹೆಚ್ಚಾದರೆ ಅಪಘಾತ ಖಂಡಿತ ಆದ್ದರಿಂದ ಧರ್ಮದ ಚೌಕಟ್ಟಿನಿಂದ ಆತನಿಗೆ ಮೋಕ್ಷ ಲಭಿಸುತ್ತದೆ.
ನಾವು ಸತ್ಯದ ಹುಡುಕಾಟಕ್ಕೆ ಪರಸ್ಪರ ಸತ್ಯವನ್ನು ಒಪ್ಪಿಕೊಳ್ಳುವುದೇ ಹಿಂದೂ ಧರ್ಮ ಹಾಗಾಗಿ ಪಾಪ ಮತ್ತು ಪುಣ್ಯದ ಕೆಲಸ ಎಂಬ ಕಲ್ಪನೆ ಹಿಂದೂ ಧರ್ಮದಲ್ಲಿ ಮಾತ್ರವೇ ಇದೆ ಎಂದವರು ಹೇಳಿದರು.
ನಮ್ಮ ಸನಾತನ ಸಂಸ್ಕೃತಿ ಗುರುಶಿಷ್ಯ ಪರಂಪರೆಯನ್ನು ಹೇಳಿಕೊಟ್ಟಿದೆ. ಗುರುವಿನ ಕೆಲಸ ಶಿಷ್ಯನ ಜೀವನದ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿಯನ್ನು ತಿಳಿಸುವುದು. ನಮ್ಮ ಗ್ರಂಥಗಳು ಹಿಂದೂ ಸಂಸ್ಕೃತಿಯ ಆಧಾರ ಸ್ತಂಭಗಳು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಹಿಂದೂ ವಿದ್ಯಾದಾಯಿನೀ ಸಂಘ ಸುರತ್ಕಲ್ ಅಧ್ಯಕ್ಷ ಜಯಚಂದ್ರ ಹತ್ವಾರ್ ವಹಿಸಿದ್ದರು. ಚೇತನ್ ಸ್ವಾಗತಿಸಿ, ನವೀನ್ ಬರ್ಕೆ ವಂದಿಸಿದರು. ಸಂಜಯ್ ನಿರೂಪಿಸಿದರು