ರಾಯಚೂರು ಜಿಲ್ಲೆಯ ಮೂವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ!

ಹೊಸ ದಿಗಂತ ವರದಿ, ರಾಯಚೂರು :

ರಾಜ್ಯದ 34 ಶಾಸಕರಿಗೆ ನೀಡಿರುವ ನಿಗಮ ಮಂಡಳಿಯಲ್ಲಿ ಜಿಲ್ಲೆಯ ಮೂವರು ಶಾಸಕರಿಗೆ ಒಲಿದಿರುವ ಅಧ್ಯಕ್ಷ ಸ್ಥಾನ.
ಐದು ಬಾರಿ ಶಾಸಕರಾಗಿರುವ ಜಿಲ್ಲೆಯ ಸಿಂಧನೂರಿನ ಹಂಪನಗೌಡ ಬಾದರ್ಲಿ ಅವರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ. ಸತತ ಎರಡನೇ ಬಾರಿ ಗೆದ್ದಿರುವ ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್‌ರಿಗೆ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಸ್ಥಾನ ಹಾಗೂ ಎರಡನೇ ಬಾರಿ ಗೆಲುವು ಸಾಧಿಸಿದ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಅವರಿಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಆದರೆ ಇವರಿಗೆಲ್ಲ ಸಮಾಧಾನವಿಲ್ಲ. ಒಳಗೊಳಗೇ ಅಸಮಾಧಾನದ ಹೊಗೆ ಆಡುತ್ತಿದೆ.

ಐದು ಬಾರಿ ಆಯ್ಕೆ ಆಗುವ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರಿಗೆ ನಿಗಮ ಮಂಡಳಿಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ಸುತಾರಾಂ ಮನಸ್ಸಿಲ್ಲ. ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ಎಂದಷ್ಟೇ ಪ್ರತಿಕ್ರೀಯೆ ನೀಡಿದ್ದಾರೆ.

ಇನ್ನು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮತ್ತು ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರ್ವಿಹಾಳ ಅವರು ಯಾವುದೇ ಪ್ರತಿಕ್ರೀಯೆ ನೀಡದೇ ಮೌನಕ್ಕೆ ಜಾರಿಕೊಂಡಿದ್ದಾರೆ.
ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ನಾಲ್ವರು ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದರು. ಇವರಲ್ಲಿ ಮೂರನೇ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ ಮಾನ್ವಿ ಕ್ಷೇತ್ರದ ಶಾಸಕ ಹಂಪಯ್ಯ ನಾಯಕರಿಗೆ ಯಾವುದೇ ಸ್ಥಾನವನ್ನು ನೀಡದೇ ಕೈಬಿಡಲಾಗಿದೆ.

ಬಾದರ್ಲಿ ಮುಂದಿನ ನಡೆ?

2013ರಲ್ಲಿ ಶಾಸಕರಾಗಿ ನಾಲ್ಕನೇ ಬಾರಿ ಆಯ್ಕೆ ಆದಾಗ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾನ ಕೈ ತಪ್ಪಿ(ಸಿ)ತ್ತು. ಆಗ ಎಂಎಸ್‌ಐಎಲ್ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಆಗಲೂ ಒಲ್ಲದ ಮನಸಿನಿಂದಲೇ ಒಪ್ಪಿದ್ದರೆನನಬಹದು. 2023ರಲ್ಲಿ ಐದನೇ ಬಾರಿ ಗೆಲವು ಸಾಧಿಸುವ ಮೂಲಕ ಹಂಪನಗೌಡ ಬಾದರ್ಲಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದರು.
ಈ ಬಾರಿ ಅವರಿಗೆ ಸಚಿವ ಸ್ಥಾನ ಖಚಿತ ಎಂದೇ ಹೇಳಲಾಗಿತ್ತು. ಆದರೆ, ಈ ಬಾರಿಯೂ ಅವರನ್ನು ಸಂಪುಟದಿಂದ  ಕೈ ಬಿಡಲಾಯಿತು. ಇದು ಬಾದರ್ಲಿಯವರ ಬೇಸರಕ್ಕೆ ಕಾರಣವಾಗಿತ್ತು. ಈಚೆಗೆ ನನಗೆ ನಿಗಮ ಮಂಡಳಿ ಕೊಟ್ಟರೆ ಸ್ವೀಕರಿಸುವುದಿಲ್ಲ ಎನ್ನುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಆದರೆ ಕಾಂಗ್ರೆಸ್ ಮತ್ತೆ ಅವರನ್ನು ಗಣನೆಗೆ ತೆಗೆದುಕೊಂಡಿದೆ. ಪಕ್ಷದ ನಿರ್ಧಾರವನ್ನು ಶಾಸಕ ಬಾದರ್ಲಿ ಹೇಗೆ ಪರಿಗಣಿಸುತ್ತಾರೋ ಕಾದು ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!