ಶಾಲಾವರಣವೇ ಉದ್ಯಾನ, ನಳನಳಿಸುತ್ತವೆ 470 ಮರ: ಶಿಕ್ಷಕರ ಪರಿಸರ ಪ್ರೀತಿ ಜನಮೆಚ್ಚುಗೆ

-ಸಂತೋಷ ರಾಯ್ಕರ, ಮುಂಡಗೋಡ
ತಾಲೂಕಿನ ಹುನಗುಂದ ಗ್ರಾಮದಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಶಾಲೆಯ ಆವರಣದಲ್ಲಿ ಕೈತೋಟ ಹಾಗೂ ಸುಂದರ ಉದ್ಯಾನವನ ಬೆಳೆಸುವ ಮೂಲಕ ಮಾದರಿ ಪ್ರೌಢ ಶಾಲೆಯನ್ನಾಗಿ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಹುನಗುಂದ ಗ್ರಾಮದಲ್ಲಿ 2007 ರಲ್ಲಿ 4 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಪ್ರೌಢ ಶಾಲೆಯನ್ನು ಆರಂಭಿಸಲಾಗಿದೆ. ಈ ಪ್ರೌಢ ಶಾಲೆಯಲ್ಲಿ 201 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 7 ಶಿಕ್ಷಕರು, ಒಬ್ಬ ಮುಖೋಧ್ಯಾಪಕಿ ಹಾಗೂ ಒಬ್ಬ ಕಚೇರಿಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
2013 ರಿಂದ ಈ ಶಾಲೆಯಲ್ಲಿ ಶಿಕ್ಷಕರು ಖಾಲಿ ಬಿದ್ದಿದ್ದ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ಸಮರ್ಪಕವಾಗಿ ಬೆಳೆಸುವ ಮೂಲಕ ಉದ್ಯಾನವನವನ್ನಾಗಿ ಮಾಡಿ ಪರಿಸರ ಪ್ರಿಯ ಶಾಲೆಯನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
470 ಮರಗಳು:
ಈ ಪ್ರೌಢ ಶಾಲೆಯಲ್ಲಿ ಸದ್ಯ 470 ಮರಗಳಿದ್ದು, ನೇರಳ, ಬದಾಮಿ, ತೆಂಗು, ಪೇರು, ಸಂಪಿಗೆ, ಮದರಂಗಿ, ಲಿಂಬು, ಬಿಲ್ವಪತ್ರೆ, ಬೇವು, ಸಕ್ಕರೆ ಹಣ್ಣು, ಹೊಂಗೆ, ಸಾಗುವಾನಿ, ಸಿಲ್ವರ್, ನುಗ್ಗೆ, ಬಾಳೆ, ಅಶೋಕ ಹೀಗೆ ವಿವಿಧ ಬಗೆಯ ಗಿಡಗಳನ್ನು ಬೆಳೆಸಲಾಗಿದೆ. ಮುಂಡಗೋಡ, ಕಲಘಟಗಿ ಅರಣ್ಯ ಇಲಾಖೆಯಿಂದ ಹಾಗೂ ಕಲಘಟಗಿ ತೋಟಗಾರಿಕೆ ಇಲಾಖೆಯಿಂದ ಸಸಿಗಳನ್ನು ತಂದು ಬೆಳೆಸಲಾಗಿದೆ.
ಆವರಣದಲ್ಲಿ ಕೈ ತೋಟ:
ಶಾಲೆಯಲ್ಲಿ ಕೈತೋಟವನ್ನು ಸಹ ಮಾಡಲಾಗಿದ್ದು, ಟೊಮ್ಯಾಟೋ, ಹಸಿಮೆಣಸು, ಬದನೆಕಾಯಿ, ಅವರೆಕಾಯಿ, ನುಗ್ಗೆಕಾಯಿ, ಬಾಳೆ ಹೀಗೆ ವಿವಿಧ ಬಗೆಯ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇಲ್ಲಿ ಬೆಳೆದ ತರಕಾರಿಯನ್ನು ಮಕ್ಕಳ ಬಿಸಿಯೂಟಕ್ಕೆ ಬಳಕೆ ಮಾಡಲಾಗುತ್ತದೆ.

ಮಗುವಿಗೊಂದು ಮರ ಹಚ್ಚಿಸಿದ ಶಿಕ್ಷಕರು
ಶಾಲೆಯ ಕಟ್ಟಡದ ಅಕ್ಕ ಪಕ್ಕದಲ್ಲಿರುವ ನೂರಾರು ಗಿಡಗಳನ್ನು ಶಿಕ್ಷಕರೆಲ್ಲರೂ ಸೇರಿ ನಿರ್ವಹಣೆ ಮಾಡುತ್ತಾರೆ. ಉಳಿದ ಗಿಡಗಳನ್ನು ಮಗುವಿಗೊಂದು ಮರವನ್ನು ನಿರ್ವಹಣೆ ಮಾಡಲು ನೀಡಲಾಗಿದೆ. ಹತ್ತಾರು ದಿನಕ್ಕೊಮ್ಮೆ ಬೆಳಗ್ಗೆ, ಸಂಜೆ ಅಥವಾ ಆಟದ ಸಮಯದಲ್ಲಿ ವಿದ್ಯಾರ್ಥಿಗಳು ತಮಗೆ ನೀಡಿದ ಗಿಡಕ್ಕೆ ನೀರು ಹಾಕುವುದು ಹಾಗೂ ಸ್ವಚ್ಛತೆ ಮಾಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!