ಭರ್ತಿಯಾದ ತುಂಗಭದ್ರ ಜಲಾಶಯವನ್ನು ಕಣ್ತುಂಬಿಕೊಳ್ಳಲು ಹರಿದುಬರುತ್ತಿದೆ ಜನಸಾಗರ

– ವೆಂಕಟೇಶ ದೇಸಾಯಿ, ಬಳ್ಳಾರಿ
ಪ್ರಸಕ್ತ ವರ್ಷ ಅವಧಿಗೆ ಮುನ್ನವೇ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದು, ಪ್ರವಾಸಿಗರು ಇಲ್ಲಿನ ಪರಿಸರ, ಸೌಂದರ್ಯ ಸವಿ ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ. ಜಲಾಶಯದ 33 ಕ್ರಸ್ಟ್ ಗೇಟ್ ಗಳ ಮೂಲಕ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದ್ದು, ನೋಡುಗರ ಗಮನಸೆಳೆಯುತ್ತಿದೆ. ಅದರಲ್ಲೂ ಸಂಜೆ ವೇಳೆ ಬಣ್ಣ ಬಣ್ಣದ ದೀಪಗಳ ಅಲಂಕಾರ ಕಣ್ಮನ ತುಂಬಿಕೊಳ್ಳಲು ಪ್ರೀತಿಯ ಆಹ್ವಾನ ನೀಡುತ್ತಿದೆ. ಜಲಾಶಯ ವೀಕ್ಷಣೆಗೆ ನಾನಾ ಕಡೆಯಿಂದ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ಜಲಾಶಯದಲ್ಲಿ ಸಂಗ್ರಹವಾದ ನೀರು, ಅಲೆಗಳ ಅಬ್ಬರ, ಹರಿಯುವ ನೀರನ್ನು ಕಣ್ತುಂಬಿಕೊಳ್ಳಲು ಮುಂದಾಗಿದ್ದಾರೆ. ಜಲಾಶಯದ 33 ಕ್ರಸ್ಟ್ ಗೇಟ್ ಗಳಿಗೂ ಬಣ್ಣಬಣ್ಣದ ದೀಪಗಳನ್ನು ಅಳವಡಿಸಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ.
ಹೊರ ಹರಿವು ಹೆಚ್ಚಳ :
ತುಂಗಭದ್ರಾ ಜಲಾಶಯ ಮೇಲ್ಭಾಗದಲ್ಲಿ ಸುರಿದ ಮಳೆಯಿಂದ ಪ್ರಸಕ್ತ ವರ್ಷ ಅವಧಿಗೂ ಮುನ್ನವೇ ಜಲಾಶಯ ಭರ್ತಿಯಾಗಿದೆ. 1633 ಅಡಿ ಗರಿಷ್ಠಮಟ್ಟ ಇದ್ದು, 1631.10 ನೀರು ಸಂಗ್ರಹವಾಗಿದೆ. ಒಳ ಹರಿವು1,67,281 ಕ್ಯೂಸೆಕ್ಸ್ ಇದ್ದು, 1,50,503 ಕ್ಯೂಸೆಕ್ಸ್ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ನೀರಿನ ಸಾಮರ್ಥ್ಯ 105.788 ಟಿಎಂಸಿ ಇದ್ದು, ಸದ್ಯ 98.258 ಟಿಎಂಸಿ ನೀರು ಸಂಗ್ರಹವಿದೆ. ಸುರಕ್ಷತೆ ದೃಷ್ಟಿಯಿಂದ ಜಲಾಶಯದ ನಾಲ್ಕೂ ದಿಕ್ಕುಗಳಲ್ಲೂ ಜಲಾಶಯ ಮಂಡಳಿ ಸೂಕ್ತ ಭದ್ರತೆ ಕಲ್ಪಿಸಿದೆ.
ಮ್ಯೂಸಿಕಲ್ ಫೌಂಟೇನ್
ಜಲಾಶಯದ ಬಳಿ ಇರುವ ಉದ್ಯಾನವನದಲ್ಲಿ ಸಂಜೆ ಮ್ಯೂಸಿಕಲ್ ಫೌಂಟೇನ್ ಆನಂದಿಸಲು ನಿತ್ಯ ಸಂಜೆ ಸಾವಿರಾರು ಜನರು ತೆರಳುವುದು ಸಾಮಾನ್ಯವಾಗಿದೆ. ಕುಟುಂಬ ಸಮೇತ ಮನೆಯಲ್ಲಿ ಸಿದ್ದಪಡಿಸಿದ ಆಹಾರ ಪದಾರ್ಥಗಳನ್ನು ತಂದು ಉದ್ಯಾನವನದಲ್ಲಿ ಸವಿಯುವುದು ಕಂಡು ಬರುತ್ತಿದೆ. ಸಮೀಪದ ಪಂಪಾ ಸರೋವರಕ್ಕೂ ಪ್ರವಾಸಿಗರು ಬರುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!