ಬಿಜೆಪಿ ಸರ್ಕಾರವನ್ನು ಟೀಕಿಸುವವರಿಗೆ ವಕ್ಫ್ ಸಮಿತಿಯಲ್ಲಿ ಸ್ಥಾನ: ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಅಲ್ಪಸಂಖ್ಯಾತರ ಘಟಕ

ಹೊಸದಿಗಂತ ವರದಿ ಮಡಿಕೇರಿ:
ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ನರೇಂದ್ರಮೋದಿ ಅವರನ್ನು ಟೀಕಿಸುವವರಿಗೆ ಜಿಲ್ಲಾ ವಕ್ಛ್ ಸಮಿತಿಯಲ್ಲಿ ಸ್ಥಾನ ನೀಡಲಾಗಿದ್ದು, ಸದಸ್ಯತ್ವ ಅಲಂಕರಿಸಿರುವ ಇತರ ಪಕ್ಷದವರು ಮೂಲ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಳ್ಳಲಿ ಎಂದು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಸದಸ್ಯ ಹಾಗೂ ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಟಿ.ಎಸ್.ಸಮೀರ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತರ ಪಕ್ಷದ ಸದಸ್ಯರು ಯಾವ ಮುಖವನ್ನಿಟ್ಟುಕೊಂಡು ವಕ್ಫ್ ಸಮಿತಿಯ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದು ಪ್ರಶ್ನಿಸಿದರು. 21 ಸ್ಥಾನಗಳಲ್ಲಿ 10 ಸ್ಥಾನವನ್ನು ಇತರ ಪಕ್ಷದವರಿಗೆ ನೀಡಲಾಗಿದೆ. ನಾವು ಬಿಜೆಪಿ ಪಕ್ಷ ಸೇರಿದ್ದೇವೆ ಎಂಬ ಕಾರಣಕ್ಕೆ ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ವೈಯುಕ್ತಿಕ ನಿಂದನೆ ಮಾಡಲಾಗುತ್ತಿತ್ತು. ಅಲ್ಲದೆ ಸಮುದಾಯದ ದ್ರೋಹಿಗಳಂತೆ ಬಿಂಬಿಸಿದ್ದಾರೆ. ಆದರೆ ಈಗ ಬಿಜೆಪಿ ಆಡಳಿತದ ವಕ್ಫ್ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರುಗಳು ಬಿಜೆಪಿಗೆ ಸೇರ್ಪಡೆಗೊಳ್ಳಲಿ ಎಂದು ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಆಡಳಿತವಿದೆ. ಈ ಹಿಂದೆ ಇದ್ದ ಸರ್ಕಾರಗಳು ಬಿಜೆಪಿ ಕಾರ್ಯಕರ್ತರಿಗೆ ವಕ್ಛ್ ಸಮಿತಿಯಲ್ಲಿ ಅವಕಾಶ ನೀಡಿರಲಿಲ್ಲ. ಆದರೆ ಇಂದು ಇತರ ಪಕ್ಷದವರಿಗೆ ಸ್ಥಾನ ನೀಡಲಾಗಿದ್ದು, ಸಕ್ರಿಯವಾಗಿ ತೊಡಗಿಸಿಕೊಂಡವರನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತರ ಘಟಕದ ನಗರ ಕಾರ್ಯದರ್ಶಿ ಸೈಯ್ಯದ್ ಯಾಸಿನ್, ವಕ್ಫ್ ಸಮಿತಿ ಸದಸ್ಯ ಮೊಹಮ್ಮದ್ ಹಾಜಿ, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಮುಸ್ತಫ ಹಾಗೂ ಸದಸ್ಯ ಪಿ.ಇ.ಮುಸ್ತಫ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!