November 9, 2026
Monday, November 9, 2026
spot_img

ಗೋಸಾಕಣೆಯಿಂದ ಸ್ವಾವಲಂಬಿ ಬದುಕು ಸಾಧ್ಯ; ಗೋವಿನ ಸಂತತಿ ಉಳಿಸಲು ಎಲ್ಲರೂ ಮುಂದಾಗಬೇಕು: ಚಂದ್ರಿಕಾ ರೈ

ಹೊಸದಿಗಂತ ವರದಿ ಉಳ್ಳಾಲ:

ಗೋಸಾಕಣೆಯಿಂದ ಜನರು ದೂರವಾಗುತ್ತಿರುವುದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗೋಸಾಕಣೆಯತ್ತ ಎಲ್ಲರೂ ಆಸಕ್ತಿ ತೋರುವ ಮೂಲಕ ಸ್ವಾವಲಂಬಿ ಹಾಗೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಗೋವಿನ ಸಂತತಿಯೇ ನಶಿಸುವ ಅಪಾಯವಿದ್ದು, ಭವಿಷ್ಯದ ಪೀಳಿಗೆಗೆ ಗೋವಿನ ಪರಿಚಯವೇ ಇಲ್ಲದಂತಾಗಬಹುದು ಎಂದು ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಚಂದ್ರಿಕಾ ರೈ ಅಭಿಪ್ರಾಯಪಟ್ಟರು.

ಗೋಮಾತೆಯ ಆರಾಧನೆ ನಮ್ಮ ಸಂಸ್ಕೃತಿಯ ಭಾಗ

ಉಳ್ಳಾಲ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಸೋಮವಾರ ಕೊಲ್ಯದ ನಾರಾಯಣ ಸಫಲ್ಯ ಅವರ ಮನೆಯಲ್ಲಿ ಆಯೋಜಿಸಿದ್ದ ಸಾಮೂಹಿಕ ಗೋಪೂಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ತಮ್ಮ ಕುಟುಂಬ ಕೃಷಿ ಹಿನ್ನೆಲೆಯದ್ದಾಗಿದ್ದು, ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಬಳಿಕ ದನದ ಹಾಲು ಮಾರಿ ಜೀವನ ಸಾಗಿಸಿದ ಅನುಭವವಿದೆ ಎಂದು ನೆನಪಿಸಿಕೊಂಡರು. ಬದುಕಿಗೆ ಆಸರೆಯಾಗಿರುವ ಗೋಮಾತೆಯನ್ನು ದೀಪಾವಳಿಯ ಸಂದರ್ಭದಲ್ಲಿ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸುವುದರ ಜೊತೆಗೆ, ಗೋವಿನ ಬಗ್ಗೆ ಗೌರವ ಬೆಳೆಸುವ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಮುಂದುವರಿಸಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಹಿರಿಯ ಸದಸ್ಯೆ ದೇವಕಿ ಉಳ್ಳಾಲ್ ಮಾತನಾಡಿ, ಇಂದಿನ ದಿನಗಳಲ್ಲಿ ಜನರು ಗೋಸಾಕಣೆಯಿಂದ ವಿಮುಖರಾಗುತ್ತಿದ್ದಾರೆ. ಗೋವುಗಳನ್ನು ಸಾಕುವುದರಲ್ಲಿರುವ ಕಷ್ಟ ಮತ್ತು ಜವಾಬ್ದಾರಿ ಹೈನುಗಾರರಿಗೆ ಮಾತ್ರ ತಿಳಿದಿರುತ್ತದೆ. ಗೋವು ಅನೇಕ ಕುಟುಂಬಗಳ ಬದುಕಿಗೆ ಆಧಾರವಾಗಿದ್ದು, ಅದನ್ನು ಸಾಕಲು ಸಾಧ್ಯವಾಗದಿದ್ದರೆ ಮಾರಾಟ ಮಾಡುವ ಬದಲು ಗೋಪ್ರೇಮಿಗಳಿಗೆ ದಾನ ಮಾಡುವುದು ಉತ್ತಮ ಸಂಪ್ರದಾಯ ಎಂದು ತಿಳಿಸಿದರು.

ಹಲವು ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಮೂಡ ಮಾಜಿ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು, ಉಪಾಧ್ಯಕ್ಷ ಪ್ರಕಾಶ್ ಕುಂಪಲ, ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಚಂಚಲಾಕ್ಷಿ, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಅಮಿತಾ ಅಶ್ವಿನ್ ಬಂಡಿಕೊಟ್ಯ, ಉಳ್ಳಾಲ ನಗರಸಭೆ ಮಾಜಿ ಉಪಾಧ್ಯಕ್ಷೆ ಸಪ್ನ ಹರೀಶ್, ಕೋಟೆಕಾರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯೆ ಸಫಿಯ, ಸೋಮೇಶ್ವರ ಪುರಸಭೆ ನಾಮನಿರ್ದೇಶಿತ ಸದಸ್ಯ ಪ್ರೇಮ್ ಕೊಲ್ಯ, ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ಯು.ಟಿ. ಫರೀದ್, ಉದ್ಯಮಿ ಪ್ರಶಾಂತ್ ಮತ್ತು ಪೂರ್ಣಿಮ ದಂಪತಿ, ಸೋಮೇಶ್ವರ ಪುರಸಭೆ ವಿಪಕ್ಷ ನಾಯಕ ಪುರುಷೋತ್ತಮ ಶೆಟ್ಟಿ ಪಿಲಾರು, ಕೃಷಿಕ ನಾರಾಯಣ ಸಫಲ್ಯ, ಪವನ್ ರಾಜ್ ಕೊಲ್ಯ, ರಾಜ ಬಂಡಸಾಲೆ, ಮೂಗಪ್ಪ ಹಾಗೂ ರೂಪೇಶ್ ಭಟ್ನಗರ ಉಪಸ್ಥಿತರಿದ್ದರು.

ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Must Read