ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಮುಂಬೈನ ಜುಹು ಪ್ರದೇಶದಲ್ಲಿ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ವರದಿಯಾಗಿದೆ. ಫುಟ್ಬಾಲ್ ಪಂದ್ಯವನ್ನು ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ನಟ ಟೈಗರ್ ಶ್ರಾಫ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅವರ ಕಾರಿನ ಚಾಲಕ ಗುಂಡೇಟಿಗೆ ಗಾಯಗೊಂಡಿದ್ದಾರೆ.
ಪಟಾಕಿ ಅಂದುಕೊಂಡ ಸಾರ್ವಜನಿಕರು
ಘಟನೆ ನಡೆದ ಸಮಯದಲ್ಲಿ ಸಮೀಪದಲ್ಲೇ ಕೆಲವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಪಟಾಕಿಗಳನ್ನು ಸಿಡಿಸುತ್ತಿದ್ದರು. ಅದೇ ಸಮಯದಲ್ಲಿ ಗುಂಡಿನ ಶಬ್ದ ಕೇಳಿದಾಗ ನೆರೆದಿದ್ದ ಜನರಿಗೆ ಇದು ಪಟಾಕಿಯ ಸದ್ದು ಎಂದೇ ಭಾಸವಾಗಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ ಜನರಿಂದ ಕಿರುಚಾಟ ಕೇಳಿಬಂದಿದ್ದು, ದುಷ್ಕರ್ಮಿಗಳು ಗುಂಡು ಹಾರಿಸಿರುವುದು ಗೊತ್ತಾಗಿದೆ. ಈ ಗಲಾಟೆಯಲ್ಲಿ ಅಲ್ಲಿದ್ದ ಸಣ್ಣ ಮಕ್ಕಳು ಮತ್ತು ಸಾರ್ವಜನಿಕರು ಜೀವಭಯದಿಂದ ದಿಕ್ಕಾಪಾಲಾಗಿ ಓಡಲು ಆರಂಭಿಸಿದರು.
ಕಣ್ಣಾರೆ ಕಂಡ ಸತ್ಯ ಬಿಚ್ಚಿಟ್ಟ ನಟ ಕರಣ್
ಘಟನೆ ನಡೆದ ಸ್ಥಳದಲ್ಲೇ ಇದ್ದ ಮತ್ತೊಬ್ಬ ಕಿರುತೆರೆ ನಟ ಕರಣ್ ವೀರ್ ಮೆಹ್ರಾ, ತಮ್ಮ ಕಾರು ಟೈಗರ್ ಶ್ರಾಫ್ ಕಾರಿನ ಬೆನ್ನ ಹಿಂದೆಯೇ ಇತ್ತು ಎಂದು ವಿವರಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, “ನಾವು ಗೇಟ್ನಿಂದ ಹೊರಬಂದ ತಕ್ಷಣವೇ ಕಾರಿನ ಬಳಿ ರಕ್ತದ ಕಲೆಗಳು ಕಾಣಿಸಿಕೊಂಡವು. ಟೈಗರ್ ಅವರ ಚಾಲಕನಿಗೆ ಗುಂಡು ತಗುಲಿರುವುದು ನನಗೆ ತಿಳಿಯಿತು. ಟೈಗರ್ ಸುರಕ್ಷಿತವಾಗಿದ್ದಾರೆ ಎಂಬ ಸಮಾಧಾನವಿದ್ದರೂ, ಗಾಯಗೊಂಡಿರುವ ಚಾಲಕ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದು ಕಣ್ಣೀರಾಕಿದರು. ಅಲ್ಲದೆ, ನಟನ ಕುಟುಂಬದ ಜೊತೆ ತನಗಿರುವ ಒಡನಾಟವನ್ನು ನೆನೆದು ಈ ಘಟನೆ ತೀವ್ರ ನೋವುಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಭದ್ರತಾ ಆತಂಕ
ಘಟನೆಯ ನಂತರ ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲೇ ಟೈಗರ್ ಶ್ರಾಫ್ ತಮ್ಮ ಗಾಯಗೊಂಡ ಚಾಲಕನೊಂದಿಗೆ ಸ್ಥಳದಿಂದ ನಿರ್ಗಮಿಸಿದ್ದರು. ಸೆಲೆಬ್ರಿಟಿಗಳ ಮೇಲೆ ನಡೆದಿರುವ ಈ ದಿಢೀರ್ ದಾಳಿಯು ಮುಂಬೈನ ಪ್ರಮುಖ ಪ್ರದೇಶಗಳ ಭದ್ರತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



