ಏಕವಚನ ಹೇಳಿಕೆ ನನ್ನದೇ ಹೊರತು ಪಕ್ಷದ್ದಲ್ಲ: ಅನಂತ್ ಕುಮಾರ್ ಹೆಗಡೆ

ಹೊಸದಿಗಂತ ವರದಿ ಶಿರಸಿ:

ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದ ಹೇಳಿಕೆ ಬಳಸಿರುವುದು ನನ್ನ ಹೇಳಿಕೆಯೇ ಹೊರತು ಪಕ್ಷದ ಹೇಳಿಕೆ ಅಲ್ಲ. ಆದರೆ ನಾನು ಏಕವಚನ ಪ್ರಯೋಗಿಸಿದ ಬಗ್ಗೆ ಮಾತನಾಡುವ ಸಿದ್ದರಾಮಯ್ಯ, ಮೋದಿ ಸೇರಿದಂತೆ ಬಿಜೆಪಿ ನಾಯಕರಿಗೆ ಏಕ ವಚನ ಪ್ರಯೋಗಿಸಿದ್ದು ಸರಿಯೇ? ಹಿಂದೂ ಸಮಾಜದ ಅವಹೇಳನ ಮಾಡುವ ಸಿದ್ದರಾಮಯ್ಯ ನನ್ನಲ್ಲಿ ಬಹಿರಂಗ ಚರ್ಚೆಗೆ ಬರಲಿ ಎಂದು ಸಂಸದ ಅನಂತಕುಮಾರ್‌ ಹೆಗಡೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ. ನನ್ನ ಸಿದ್ದರಾಮಯ್ಯ ಕುರಿತು ಹೇಳಿದ್ದು ನನ್ನ ವೈಯಕ್ತಿಕ ಹೇಳಿಕೆ. ಅಲ್ಪಸಂಖ್ಯಾತರ ಮತಕ್ಕಾಗಿ ಜೊಲ್ಲು ಸುರಿಸುತ್ತಾ, ಬಹುಸಂಖ್ಯಾತ ಹಿಂದೂಗಳ ಅವಕೇಳನ ಮಾಡುವ ಸಿದ್ದರಾಮಯ್ಯಗೆ ಯಾವ ಭಾಷೆಯಲ್ಲಿ ಹೇಳಲಿ ಎಂದು ಕಠುವಾಗಿ ಟೀಕಿಸಿದರು.

ಸಂಸ್ಕೃತಿ ಬಗ್ಗೆ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪೂಜನೀಯ ದೇವಸ್ಥಾನಗಳ ಬಗ್ಗೆ ಅಸಭ್ಯವಾಗಿ ಮೊದಲು ಮಾತನಾಡಿದ್ದು ಸಿದ್ದರಾಮಯ್ಯ. ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು?. ಸಿದ್ದರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಇದೆಲ್ಲದರ ಬಗ್ಗೆ ಜನರ ಮುಂದೆ ಚರ್ಚೆಗೆ ನಾನು ಸಿದ್ಧನಿದ್ದೇನೆ. ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿದ್ದು, ಸರಿಯಾಗಿದ್ದರೆ ನಾನು ಮಾತನಾಡಿದ್ದು ಕೂಡ ಸರಿಯಿದೆ. ಕಾಂಗ್ರೆಸ್’ನವರಿಗೆ, ಸಿದ್ದರಾಮಯ್ಯಗೆ ಇಲ್ಲದ ಸಭ್ಯತೆ ಬಿಜೆಪಿಯವರಿಗೇಕೆ? ಎಂದು ಪ್ರಶ್ನಿಸಿದರು.

ರಾಮ ಮಂದಿರದ ವಿಷಯದಲ್ಲಿ ಸಿಎಂ ಹೇಗೆ ವರ್ತಿಸಿದ್ದಾರೆ ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ಸಿಗರಾದ ಸಲ್ಮಾನ್ ಖುರ್ಷಿದ್ ಮೋದಿಯವರನ್ನು ಕಪ್ಪೆ, ಮಂಗ, ನಪಂಸುಕ ಎಂದು ಕರೆದರು, ಶರದ್ ಪವಾರ್ ಹಿಟ್ಲರ್ ಎಂದರು. ಸಿಎಂ ಸಿದ್ದರಾಮಯ್ಯ ಏಕವಚನದಲ್ಲಿ ಮಾಸ್ ಮರ್ಡರರ್ ಎಂದು ಕರೆದರು. ದಿಗ್ವಿಜಯ ಸಿಂಗ್ ರಾವಣ ಎಂದು ಕರೆದರು, ಜಯರಾಂ ರಮೇಶ್ ಭಸ್ಮಾಸುರ ಎಂದರು. ಇನ್ನೂ ಏನೇನು ಹೇಳಿಸಿಕೊಳ್ಳಬೇಕು ನಾವು? ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ? ಹಿಂದೂ ಸಮಾಜದ ಬಗ್ಗೆ ಎಷ್ಟು ಕೀಳಾಗಿ ಮಾತನಾಡಿದ್ದಾರೆ. ಹಿಂದೂ ಸಮಾಜ ಅಂದ್ರೆ ಅಷ್ಟು ಕೀಳಾ.? ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!