August 22, 2026
Saturday, August 22, 2026
spot_img

ಕಾಡಿಗೆ ಬಿಟ್ಟುಬಂದ್ರೂ ಅದೇ ಅರಳಿಕಟ್ಟೆಯ ಬಳಿ ವಾಪಾಸಾದ ಹಾವು! ನಿಗೂಢ ಘಟನೆ ವೈರಲ್‌

ಸಾಮಾನ್ಯವಾಗಿ ಹಾವುಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸುತ್ತಲೇ ಇರುತ್ತವೆ. ಒಂದೊಮ್ಮೆ ಹಾವನ್ನು ನೋಡಿ ಹಾವು ಹಿಡಿಯುವವರನ್ನು ಕರೆಸುವುದರೊಳಗಾಗಿ ಹಾವು ಮತ್ತೊಂದು ಜಾಗಕ್ಕೆ ಹೋಗಿಬಿಟ್ಟಿರುತ್ತದೆ. ಆದರೆ ಮಧ್ಯಪ್ರದೇಶದ ಧಾರ್‌ನಲ್ಲಿ ನಾಗರಹಾವೊಂದು ಸತತವಾಗಿ ಹನ್ನೊಂದು ದಿನದಿಂದ ಒಂದೇ ಜಾಗದಲ್ಲಿದೆ. ಹಾವನ್ನು ಕಂಡು ಭಯಭೀತರಾದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ನಂತರ ಹಾವನ್ನು ಕಾಡಿನಲ್ಲಿ ಬಿಟ್ಟು ಬರಲಾಗಿದೆ.

ಆದರೆ ಕಾಡಿಗೆ ಬಿಟ್ಟು ಬಂದ ಕೆಲವೇ ದಿನದಲ್ಲಿ ಹಾವು ಮತ್ತೆ ವಾಪಾಸಾಗಿದೆ. ಅದೇ ಅರಳಿಕಟ್ಟೆಯ ಬಳಿ ಕುಳಿತುಕೊಂಡಿದೆ. ಮೊದಮೊದಲು ಹೆದರಿದ ಜನ ಇದೀಗ ದೇವರೇ ನಮ್ಮನ್ನು ಕಾಯಲು ಬಂದಿದ್ದಾರೆ ಎಂದು ಹಾವಿಗೆ ನಮಸ್ಕರಿಸುತ್ತಿದ್ದಾರೆ. ಗಂಧವಾನಿ ಪ್ರದೇಶದ ಪುಟ್ಟ ಗ್ರಾಮ ಸಾಲಿಯಲ್ಲಿ ಈ ಘಟನೆ ನಡೆದಿದೆ.

ಹಾವಿಗಾಗಿ ದೇವಸ್ಥಾನ ನಿರ್ಮಾಣ

ಇದು ದೇವರ ಪವಾಡ ನಮ್ಮನ್ನು ಕಾಯಲು ದೇವರು ಆಗಮಿಸಿದೆ ಎಂದು ನಂಬಿದ್ದು, ಹಾವು ಇರುವ ಜಾಗದಲ್ಲಿ ದೇವಸ್ಥಾನ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾವು ಆರೋಗ್ಯವಾಗಿದೆ. ಕಾಡಿಗೆ ಬಿಟ್ಟು ಬಂದರೂ ಮತ್ತೆ ಇದೇ ಜಾಗಕ್ಕೆ ವಾಪಾಸ್‌ ಬಂದಿದ್ದು ಏಕೆ ಎಂದು ತಿಳಿಯದೇ ಆಶ್ಚರ್ಯವ್ಯಕ್ತಪಡಿಸಿದ್ದಾರೆ.

ಹಾವಿನ ವಿಡಿಯೋ ವೈರಲ್‌

ಹಾವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇತರ ಜಿಲ್ಲೆ ಹಾಗೂ ಗ್ರಾಮಗಳಿಂದಲೂ ಜನ ಹಾವನ್ನು ನೋಡಲು ಆಗಮಿಸಿದ್ದಾರೆ. ಜನ ಹೆಚ್ಚಾದಂತೆ ಸಮಸ್ಯೆ ತಪ್ಪಿದ್ದಲ್ಲ ಎಂದು ಅರಣ್ಯ ಇಲಾಖೆ, ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ನಂಬಿಕೆ ಇರಲಿ ಆದರೆ ಎಚ್ಚರಿಕೆ ಇಲ್ಲದಂತೆ ಹತ್ತಿರ ಹೋಗಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪವಾಡವೋ, ಸಹಜವೋ?

ಹಾವಿನ ಈ ವರ್ತನೆ ಪವಾಡವೋ ಅಥವಾ ಸಹಜವೋ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿದೆ. ಸುರಕ್ಷಿತ ವಾತಾವರಣ, ಆಹಾರ, ತಾಪಮಾನ ಅಥವಾ ಅಡಗಿಕೊಳ್ಳಲು ಸೂಕ್ತ ಎನಿಸಿರುವ ಜಾಗವನ್ನು ಹಾವು ಆಯ್ಕೆ ಮಾಡಿರಬಹುದು. ಅಥವಾ ಗ್ರಾಮಸ್ಥರ ನಂಬಿಕೆಯಂತೆ ದೈವ ಇಚ್ಛೆಯೂ ಇರಬಹುದು. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟದ್ದು!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !