ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ಒಂದು ವಾರ ಎಲ್ಲಾದರೂ ಹೊರಗೆ ಹೋಗುವ ಪ್ಲ್ಯಾನ್ ಇದ್ದರೆ ಸ್ವಲ್ಪ ಜಾಗರೂಕರಾಗಿರಿ. ಯಾಕೆಂದರೆ, ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಿಶೇಷವಾಗಿ ಸೆಪ್ಟೆಂಬರ್ 22 ರಿಂದ ಮಳೆಯ ಅಬ್ಬರ ಇನ್ನು ಜಾಸ್ತಿಯಾಗಲಿದ್ದು, ಹಲವೆಡೆ ಬಿರುಗಾಳಿ ಮತ್ತು ಸಿಡಿಲಿನ ಆರ್ಭಟವು ಇರಲಿದೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಚಂಡಮಾರುತವೇ ಇದಕ್ಕೆ ಕಾರಣವೆಂದು ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ಜನರಿಗೆ ಆರಂಭದ ಮೂರು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಹೆಚ್ಚಾಗಿ ಮಧ್ಯಾಹ್ನದ ನಂತರ ಅಥವಾ ರಾತ್ರಿ ಹೊತ್ತು ಮಳೆ ಜಾಸ್ತಿ ಇರಲಿದೆ.
ಸೆ. 21 ರಿಂದ 24 ರವರೆಗೆ ಧಾರಾಕಾರ ಮಳೆ
ಇನ್ನು ಕರಾವಳಿ ಜಿಲ್ಲೆಗಳಲ್ಲಿಆರಂಭದಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಿದ್ದರೂ, ಸೆ. 21 ರಿಂದ 24 ರವರೆಗೆ ಧಾರಾಕಾರ ಮಳೆ ಸುರಿಯಲಿದೆ. ಗಂಟೆಗೆ 40 ಕಿ.ಮೀವೇಗದಲ್ಲಿ ಗಾಳಿ ಬೀಸುವುದರಿಂದ ಕಡಲತೀರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ಮಲೆನಾಡು ಭಾಗದಲ್ಲಿ ತಂಪು ವಾತಾವರಣ
ಅದೇ ರೀತಿ ಮಲೆನಾಡು ಭಾಗಗಳಾದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ದಿನವಿಡೀ ತಂಪು ವಾತಾವರಣ ಇರಲಿದ್ದು, ಸಂಜೆಯಾಗುತ್ತಿದ್ದಂತೆ ಗುಡುಗು ಸಹಿತ ಮಳೆ ಸುರಿಯಲಿದೆ. ಸೆ. 22 ರಿಂದ ಮೂರು ದಿನಗಳ ಕಾಲ ಇಲ್ಲಿ ಮಳೆಯ ತೀವ್ರತೆ ದುಪ್ಪಟ್ಟಾಗಲಿದೆ ಎಂದು ಇಲಾಖೆ ತಿಳಿಸಿದೆ
ಬಿರುಗಾಳಿ ಸಹಿತ ಮಳೆ
ಉತ್ತರ ಒಳನಾಡಿನ ಭಾಗದಲ್ಲಿಸೆ. 23 ಅಥವಾ 24 ರವರೆಗೆ ಸಂಜೆ ಅಥವಾ ರಾತ್ರಿ ಹೊತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹಾವೇರಿ, ಗದಗ ಮತ್ತು ಬಾಗಲಕೋಟೆಯಲ್ಲಿ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಳಾಖೆ ತಿಳಿಸಿದೆ.



