June 5, 2026
Friday, June 5, 2026
spot_img

ಹೊಸಪೇಟೆಯಲ್ಲಿ ತಲೆಯೆತ್ತಲಿದೆ ಅತ್ಯಾಧುನಿಕ ರಂಗಮಂದಿರ: 5 ಕೋಟಿ ವೆಚ್ಚದ ಯೋಜನೆಗೆ ಸೀತಾರಾಮನ್ ಚಾಲನೆ

ಹೊಸದಿಗಂತ ವಿಜಯನಗರ:

ವಿಜಯನಗರ ಜಿಲ್ಲೆಯ ಸಾಂಸ್ಕೃತಿಕ ರಂಗಕ್ಕೆ ಭವಿಷ್ಯದಲ್ಲಿ ಹೊಸ ಮೆರುಗು ಬರಲಿದೆ. ಹೊಸಪೇಟೆ ನಗರದ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ, ಸಂಸದರ ನಿಧಿಯಡಿ ಬರೋಬ್ಬರಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅತ್ಯಾಧುನಿಕ ರಂಗಮಂದಿರಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಹಂಪಿ ಶೈಲಿಯ ಭವ್ಯ ವಿನ್ಯಾಸ

ಜಿಲ್ಲಾಧಿಕಾರಿ ಕಚೇರಿಯ ಸಮೀಪದ 3 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಈ ಭವ್ಯ ರಂಗಮಂದಿರ ತಲೆಯೆತ್ತಲಿದೆ. ಜಗತ್ಪ್ರಸಿದ್ಧ ಹಂಪಿಯ ಕಲ್ಲಿನ ರಥ ಹಾಗೂ ಸಾಲು ಮಂಟಪಗಳ ವಾಸ್ತುಶಿಲ್ಪ ಶೈಲಿಯನ್ನು ಪ್ರಧಾನವಾಗಿ ಇಟ್ಟುಕೊಂಡು ಈ ರಂಗಮಂದಿರದ ವಿನ್ಯಾಸ ರೂಪಿಸಿರುವುದು ಇದರ ವಿಶೇಷತೆಯಾಗಿದೆ. ಪ್ರಧಾನ ವಾಸ್ತು ವಿನ್ಯಾಸಕಾರರಾದ ಅವಿನ್ ಎಸ್.ಜೈನ್ ಅವರು ರಂಗಮಂದಿರದ ಈ ವಿಶಿಷ್ಟ ಮಾದರಿ ಹಾಗೂ ತಾಂತ್ರಿಕ ವಿಶೇಷತೆಗಳ ಕುರಿತು ಕೇಂದ್ರ ಸಚಿವರಿಗೆ ಸವಿವರವಾಗಿ ಮಾಹಿತಿ ನೀಡಿದರು.

ರಂಗಮಂದಿರದ ಹೈಲೈಟ್ಸ್ ಮತ್ತು ಸೌಲಭ್ಯಗಳು:

ಈ ಅತ್ಯಾಧುನಿಕ ಸಾಂಸ್ಕೃತಿಕ ಕೇಂದ್ರವು ಕೇವಲ ನಾಟಕ ಪ್ರದರ್ಶನಕ್ಕಷ್ಟೇ ಸೀಮಿತವಾಗಿರದೆ, ಕಲಾವಿದರಿಗೆ ಸಕಲ ಸೌಕರ್ಯ ನೀಡುವ ಹಬ್ ಆಗಿ ಹೊರಹೊಮ್ಮಲಿದೆ. ಇದರ ಪ್ರಮುಖ ಸೌಲಭ್ಯಗಳು ಹೀಗಿವೆ:

ಆಸನ ಸಾಮರ್ಥ್ಯ: ಮುಖ್ಯ ಸಭಾಂಗಣದಲ್ಲಿ 500 ಮತ್ತು ಬಾಲ್ಕನಿಯಲ್ಲಿ 120 ಸೇರಿದಂತೆ ಒಟ್ಟು 620 ಆಸನಗಳ ವ್ಯವಸ್ಥೆ. ಜೊತೆಗೆ 300 ಜನ ಕುಳಿತುಕೊಳ್ಳಬಹುದಾದ ಬಯಲು ರಂಗಮಂದಿರ.

ಕಲಾವಿದರ ಕೊಠಡಿಗಳು: ನಾಟಕ ಪ್ರದರ್ಶಕರಿಗಾಗಿ 9 ವಸತಿ ಕೊಠಡಿಗಳು ಮತ್ತು 2 ಸುಸಜ್ಜಿತ ಗ್ರೀನ್ ರೂಮ್‌ಗಳು.

ತಾಂತ್ರಿಕ ಸೌಲಭ್ಯ: ಅತ್ಯಾಧುನಿಕ ಧ್ವನಿಮುದ್ರಣ ಸ್ಟುಡಿಯೋ, ಡಬ್ಬಿಂಗ್ ಸ್ಟುಡಿಯೋ ಹಾಗೂ ವಿಶೇಷ ಅಭ್ಯಾಸ ಮತ್ತು ತರಬೇತಿ ಕೊಠಡಿಗಳು.

ಇತರ ಆಕರ್ಷಣೆಗಳು: ಕಲಾ ಗ್ಯಾಲರಿ, ಸುಸಜ್ಜಿತ ಗ್ರಂಥಾಲಯ ಮತ್ತು ಮಿನಿ ಥಿಯೇಟರ್‌ ಸಹ ಇರಲಿದೆ.

ಸರ್ಕಾರಿ ಕಚೇರಿ: ಇದೇ ಕಟ್ಟಡದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯೂ ಕಾರ್ಯನಿರ್ವಹಿಸಲಿದೆ.

ಗಣ್ಯರ ಉಪಸ್ಥಿತಿ

ಭೂಮಿ ಪೂಜೆಯ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಂಸದ ಇ. ತುಕಾರಾಂ, ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ ಹಾಗೂ ಹೊಸಪೇಟೆ ನಗರಸಭೆ ಅಧ್ಯಕ್ಷರಾದ ಎನ್. ರೂಪೇಶ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !