Thursday, February 2, 2023

Latest Posts

ಜನರ ಕುತೂಹಲ ಕೆರಳಿಸಿದ ಮಳಿಗೆಯಿದು – ಸಮ್ಮೇಳನದಲ್ಲೊಂದು ಪತ್ರಿಕಾ ಪ್ರಪಂಚ

– ನಿತೀಶ ಡಂಬಳ

ಹಾವೇರಿ: ಕರ್ನಾಟಕದಲ್ಲಿ ಆದ್ಯ ಪತ್ರಿಕೆ ಮಂಗಳೂರು ಸಮಾಚಾರದಿಂದ ಈಗಿನ ಎಲ್ಲ ರಾಜ್ಯ, ಪ್ರಾದೇಶಿಕ ಹಾಗೂ ಸ್ಥಳೀಯ ಪತ್ರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಅಂತಃ ಎಲ್ಲ ಪತ್ರಿಕೆಗಳನ್ನು ಸಂಗ್ರಹಿಸುವ ಕಾಯಕದಲ್ಲಿ ನಿರಂತರವಾಗಿ ತೊಡಗಿದ್ದಾರೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇಕಟ್ಟಿಗೇನಹಳ್ಳಿಯ ಕಲ್ಯಾಣ ಕುಮಾರ.

ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮಳಿಗೆಯಲ್ಲಿ ಜನರ ಕೂತುಹಲಕ್ಕೆ ಕಾರಣರಾದವರಿವರು. ಹವ್ಯಾಸ, ಅಭಿರುಚಿ ಯಾರಿಗೆ ಯಾವ ರೀತಿ ಇರುತ್ತದೆ ಎಂದು ಊಹಿಸಲಾಗದು. ವೃತ್ತಿಯಿಂದ ಶಾಲಾ ಶಿಕ್ಷಕರಾಗಿರುವ ಕಲ್ಯಾಣ ಕುಮಾರ ಸಂಗ್ರಹಿಸಿರುವ ಒಟ್ಟು ಪತ್ರಿಕೆಗಳು ಬರೊಬ್ಬರಿ 16 ಸಾವಿರ. ಅದರಲ್ಲಿ ಸುಮಾರು 6 ಸಾವಿರ ಕನ್ನಡ ಪತ್ರಿಕೆಗಳಾದರೆ ಉಳಿದವು ಅನ್ಯ ಭಾಷೆಗಳದ್ದಾಗಿವೆ.

20ನೇ ಶತಮಾನದ ಪೂರ್ವ, ಆರಂಭ ಹಾಗೂ 21ನೇ ಶತಮಾನದ ಬಹುತೇಕ ಪತ್ರಿಕೆಗಳು ಇವರ ಸಂಗ್ರಹದಲ್ಲಿವೆ. ಬಾಲ್ಯದಿಂದ ಹೆಚ್ಚಾಗಿ ಬೆಳೆದ ಓದಿನ ಅಭಿರುಚಿಯೇ ಇವರಿಗೆ ಈ ಹವ್ಯಾಸ ಮಾಡಲು ಪ್ರೇರಣೆಯಾಯಿತು. ಇವರು ಸಂಗ್ರಹಿಸಿದ ಪತ್ರಿಕೆಗಳ ಜ್ಞಾನ ಭಂಡಾರ ಅಪಾರ. ಅತೀ ದುರ್ಲಭ ಪತ್ರಿಕೆಗಳು ಇವರ ಬಳಿ ಇವೆ. ಹಾಗಾಗಿ ಅನೇಕ ಇತಿಹಾಸಕಾರರು, ಸಂಶೋಧಕರು ಇವರ ಬಳಿ ಇರುವ ಪತ್ರಿಕೆಗಳನ್ನು ಅಧ್ಯಯಿಸಲು ಬರುತ್ತಿರುತ್ತಾರೆ. ಪತ್ರಿಕೆ ಜೊತೆಗೆ ಅಂಚೆ, ನಾಣ್ಯಗಳ ಸಂಗ್ರಹವೂ ಇವರ ಬಳಿ ಇವೆ.

ಕಲ್ಯಾಣ ಕುಮಾರ್ ಅವರು ಕನ್ನಡ ಭಾಷೆ ಪತ್ರಿಕೆ ಹೊರತುಪಡಿಸಿ, ಬಂಗಾಳಿ, ಹಿಂದಿ, ಇತರ ಭಾರತೀಯ ಭಾಷೆ, ಜರ್ಮನ್, ಇಂಗ್ಲೀಷ್, ರಷಿಯನ್ ಪತ್ರಿಕೆಗಳನ್ನು ಸಹ ಸಂಗ್ರಹಿಸಿದ್ದಾರೆ. ಅಂತರ್ಜಾಲದ ಮೂಲಕ ಬೇರೆ ರಾಜ್ಯ ಹಾಗೂ ದೇಶದ ಪತ್ರಿಕೆ ಸಂಗ್ರಹಕಾರರನ್ನು ಸಂಪರ್ಕಿಸಿ ಅವರಿಂದ ಪತ್ರಿಕೆಗಳನ್ನು ಪಡೆಯುತ್ತಾರೆ.

ಹಳೇ ಕಾಲದ ಪತ್ರಿಕೆಗಳು ಬಹಳ ಇರುವುದರಿಂದ ಅವುಗಳನ್ನು ಪ್ಲಾಸ್ಟಿಕ್ ಕವರ್ ಬಳಸಿ ಸುರಕ್ಷಿತವಾಗಿರಿಸಿದ್ದಾರೆ. ಮಳಿಗೆಗೆ ಭೇಟಿ ನೀಡಿದವರೆಲ್ಲ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!