ಉಡುಪಿಯಲ್ಲೊಂದು ವಿಲಕ್ಷಣ ಘಟನೆ: ಆಳ ಸಮುದ್ರದಿಂದ ಬಂದು ನೇರ ಕಡಲತೀರದ ಮರಳಿಗೇರಿ ನಿಂತ ಬೋಟ್!

ಹೊಸ ದಿಗಂತ, ಮಂಗಳೂರು:

ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟ್ ದಾರಿ ತಪ್ಪಿ ಕಡಲತೀರಕ್ಕೆ ಬಂದು ಮರಳಿನಲ್ಲಿ ಸಿಲುಕಿಕೊಂಡ ವಿಲಕ್ಷಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಬೀಜಾಡಿಯಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಈ ಬೋಟ್ ಏ.30ರಂದು ಮಧ್ಯರಾತ್ರಿ ಮಲ್ಪೆಯಿಂದ ಮೀನುಗಾರಿಕೆ ಹೊರಟಿತ್ತು. ಮೇ 1ರ ವೇಳೆ ಮೀನುಗಾರಿಕೆ ಮುಗಿಸಿ ವಾಪಸ್ ಹೊರಟಿದ್ದು, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಗ್ಲೂ ಕ್ಲಿಚ್ ಕಾಟೇಜ್ ಬಳಿಯ ಬೀಜಾಡಿ ಸಮುದ್ರ ತೀರಕ್ಕೆ ತಲುಪಿ ಮರಳಿನಲ್ಲಿ ಸಿಲುಕಿಕೊಂಡಿದೆ.

ಈ ಬೋಟ್‌ನಲ್ಲಿ ಏಳು ಮಂದಿ ಮೀನುಗಾರರಿದ್ದರು. ಕಡಲ ತೀರದಲ್ಲಿ ಬೋಟ್ ಬಂದು ನಿಂತಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದ್ದು, ಇದು ಬೇಹುಗಾರರೇ ಎಂಬ ಸಂಶಯದಲ್ಲಿ ವಿಚಾರಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.

ಬೋಟ್‌ನಲ್ಲಿದ್ದವರು ನಿದ್ದೆಗೆ ಜಾರಿ ಈ ಘಟನೆ ಸಂಭವಿಸಿತೇ ಅಥವಾ ಭಾರೀ ಗಾಳಿಯ ಕಾರಣಕ್ಕೆ ಬೋಟ್ ದಿಕ್ಕುತಪ್ಪಿತೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆಯಲ್ಲಿ ಬೋಟ್‌ನ ಫ್ಯಾನ್‌ನ ಬ್ಲೇಡ್‌ಗಳು ಹಾನಿಗೊಳಗಾಗಿದ್ದು, ಅದನ್ನು ಸರಿಪಡಿಸಿ ಎರಡು ಜೆಸಿಬಿ ಹಾಗೂ ಎರಡು ಬೋಟ್‌ಗಳ ಸಹಾಯದಿಂದ ಬೋಟನ್ನು ಮತ್ತೆ ಆಳ ಸಮುದ್ರಕ್ಕೆ ಕೊಂಡೊಯ್ದು ಮಲ್ಪೆ ಬಂದರಿಗೆ ತಲುಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!