55 ಕೆಜಿ ತೂಕದ ವ್ಯಕ್ತಿಯನ್ನು ಹೊತ್ತು 10 ಕಿಮೀ ಸಾಗಿ ಸ್ಪರ್ಧೆ ಗೆದ್ದ ಬಲಶಾಲಿ!

ಹೊಸದಿಗಂತ ವರದಿ, ಕೊಟ್ಟೂರು:
ತನ್ನ ಹೆಗಲ ಮೇಲೆ ಬರೋಬ್ಬರಿ 55 ಕೆಜಿ ತೂಕದ ವ್ಯಕ್ತಿಯನ್ನು 10 ಕಿಮೀ ಹೊತ್ತುಕೊಂಡು ಸಾಗಿದ ವ್ಯಕ್ತಿಯ ಸಾಹಸಕ್ಕೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ನಾಗರಪಂಚಮಿ ಹಬ್ಬದ ಅಂಗವಾಗಿ ರಾಂಪುರನಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತನ್ನ ಹೆಗಲ ಮೇಲೆ ವ್ಯಕ್ತಿಯೊಬ್ಬರನ್ನು ಹೊತ್ತುಕೊಂಡು ಎಲ್ಲಿಯೂ ಇಳಿಸದೆ 10 ಕಿ.ಮೀ. ನಡೆದು ಸಾಹಸ ಪ್ರದರ್ಶಿಸಿದ್ದಾನೆ.
ರಾಂಪುರ ಗ್ರಾಮದ ಡಿ.ಜಿ. ನಾಗರಾಜ್ ಎಂಬಾತ ಸ್ಪರ್ಧೆಯಲ್ಲಿ ಜಯಸಿ 15 ಸಾವಿರ ರೂ. ಬಹುಮಾನ ತನ್ನದಾಗಿಸಿಕೊಂಡಿದ್ದಾನೆ. ಗ್ರಾಮದಿಂದ ಹ್ಯಾಳ್ಯಾ ಗ್ರಾಮದ ವರಗಳ ಬಸವೇಶ್ವರ ದೇವಸ್ಥಾನದವರೆಗೆ 10 ಕಿಮೀ ದೂರವನ್ನು 55 ಕೆ.ಜಿ ತೂಕದ ವಿರುಪಾಕ್ಷ ಎಂಬ ವ್ಯಕ್ತಿಯೊಬ್ಬನನ್ನು ಹೆಗಲ ಮೇಲೆ ಕೂಡಿಸಿಕೊಂಡು ಎಲ್ಲಿಯೂ ನಿಲ್ಲದೆ ಹಾಗೂ ವ್ಯಕ್ತಿಯನ್ನು ಎಲ್ಲಿಯೂ ಇಳಿಸದೆ ನಿಗದಿತ ಗುರಿ ತಲುಪಿ ಅಚ್ಚರಿ ಮೂಡಿಸಿದನು.
ಹೊಸಕೋಡಿಹಳ್ಳಿ, ಸುಟ್ಟಕೋಡಿಹಳ್ಳಿ, ಬೋರನಹಳ್ಳಿ ಕ್ರಾಸ್ನಿಂದ ಕೊಟ್ಟೂರು ಪಟ್ಟಣದೊಳಗಿನಿಂದ ಸಾಗುತ್ತಿದ್ದಾಗ ಸಾರ್ವಜನಿಕರು ಕೇಕೆ, ಶಿಳ್ಳೆ ಹಾಕಿ ಪ್ರೋತ್ಸಾಹಿಸಿದರು.
ಗುರಿ ಮುಟ್ಟಲು ದಾರಿ ಮಧ್ಯದಲ್ಲಿ ಆರು ಸಾರಿ ಹೆಗಲ ಮೇಲಿದ್ದ ವ್ಯಕ್ತಿಯನ್ನು ನೆಲಕ್ಕೆ ಇಳಿಸಿ ಪುನಃ ಹೆಗಲ ಮೇಲೆ ಕೂಡಿಸಿಕೊಂಡು ನಡೆಯಬಹುದು. ಏಳನೇ ಸಾರಿ ಇಳಿಸಿದರೆ ಸೋಲು ಒಪ್ಪಿಕೊಂಡಂತೆ ಎಂದು ಒಪ್ಪಂದವಾಗಿತ್ತು. ಆದರೆ ಡಿ.ಜಿ. ನಾಗರಾಜ್, ವಿರುಪಾಕ್ಷಪ್ಪನ್ನನ್ನು ಹೆಗಲ ಮೇಲೆ ಕೂಡಿಸಿಕೊಂಡು ಹೆಗಲ ಮೇಲೆ ಯಾರೂ ಕುಳಿತ್ತಿಲ್ಲವೆಂಬಂತೆ ನಡೆದು ಹೋಗುತ್ತಿದದ್ದನ್ನು ನೋಡಿದ ಹಳ್ಳಿಗರು, ಪಟ್ಟಣವಾಸಿಗಳು ಭಲೇ ಭಲೇ ಎಂದು ಶಬ್ಬಾಷಗಿರಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!