May 3, 2026
Sunday, May 3, 2026
spot_img

ಆಟ-ಪಾಠದಲ್ಲಿ ಮುಂದಿದ್ದ ವಿದ್ಯಾರ್ಥಿನಿಯನ್ನ ಬಲಿಪಡೆದ ಹೃದಯಾಘಾತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚಾಪೇಲಿ ಗವಳಿವಾಡ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಏಳನೇ ತರಗತಿಯ ಶಾಲಾ ಬಾಲಕಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.

ಗ್ರಾಮದ ನಿವಾಸಿ ಗಂಗು ಗವಳಿ (13) ಮೃತಪಟ್ಟ ದುರ್ದೈವಿ. ಈ ಬಾಲಕಿಗೆ ಯಾವುದೇ ರೀತಿಯ ದೀರ್ಘಕಾಲದ ಕಾಯಿಲೆಗಳಾಗಲಿ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಾಗಲಿ ಇರಲಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಎಂದಿನಂತೆ ಶಾಲೆಯಲ್ಲಿ ಮತ್ತು ಮನೆಯ ಬಳಿ ಗೆಳೆಯ-ಗೆಳತಿಯರೊಂದಿಗೆ ದಿನವಿಡೀ ಆಟವಾಡಿಕೊಂಡಿದ್ದ ಗಂಗು, ರಾತ್ರಿ ಊಟ ಮುಗಿಸಿ ನೆಮ್ಮದಿಯಿಂದ ಮಲಗಿದ್ದಳು.

ಬೆಳಿಗ್ಗೆ ಎದ್ದ ಬಾಲಕಿಗೆ ಇದ್ದಕ್ಕಿದ್ದಂತೆ ವಾಂತಿಯಾಗಿದೆ. ತಕ್ಷಣವೇ ಅಸ್ವಸ್ಥಗೊಂಡ ಆಕೆ ಕೆಲವೇ ಕ್ಷಣಗಳಲ್ಲಿ ಕೊನೆಯುಸಿರೆಳೆದಿದ್ದಾಳೆ. ಆರೋಗ್ಯವಾಗಿದ್ದ ಮಗಳು ಹೀಗೆ ದಿಢೀರ್ ಸಾವನ್ನಪ್ಪಿರುವುದು ಕುಟುಂಬಸ್ಥರನ್ನು ಹಾಗೂ ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ. ಬಾಲಕಿಯ ಸಾವಿನ ಸುದ್ದಿ ಕೇಳಿ ಚಾಪೇಲಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಈ ಘಟನೆಗೆ ಸಂಬಂಧಿಸಿದಂತೆ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣದ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನ ಮಕ್ಕಳಲ್ಲಿಯೂ ಹೃದಯಾಘಾತ ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಯಾವುದೇ ಲಕ್ಷಣಗಳಿಲ್ಲದೆ ಸಂಭವಿಸುತ್ತಿರುವ ಇಂತಹ ಸಾವುಗಳು ವೈದ್ಯಕೀಯ ಲೋಕಕ್ಕೂ ಸವಾಲಾಗಿ ಪರಿಣಮಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !