ಹೊಸದಿಗಂತ ಉಳ್ಳಾಲ:
ಸಿಟಿ ಬಸ್ಸುಗಳ ಫುಟ್ ಬೋರ್ಡಲ್ಲಿ ನೇತಾಡಿಕೊಂಡು ದಿನ ನಿತ್ಯಲೂ ಪ್ರಯಾಣಿಕರು ಅಪಾಯಕಾರಿಯಾಗಿ ಪ್ರಯಾಣಿಸುತ್ತಿದ್ದರೂ ಟ್ರಾಫಿಕ್ ಪೊಲೀಸರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.ತಲಪಾಡಿಯಿಂದ- ಮಂಗಳೂರು ಕಡೆಗೆ ಚಲಿಸುತ್ತಿದ್ದ ಖಾಸಗಿ ಸಿಟಿ ಬಸ್ಸೊಂದರಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಯೋರ್ವನು ರಸ್ತೆಗೆಸೆಯಲ್ಪಟ್ಟ ವೀಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು.ಕಿಕ್ಕಿರಿದು ಪ್ರಯಾಣಿಕರನ್ನ ತುಂಬಿಸುತ್ತಿರುವ ಸಿಟಿ ಬಸ್ಸುಗಳ ವಿರುದ್ಧ ಜನಸಾಮಾನ್ಯರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ತಲಪಾಡಿಯಿಂದ ಮಂಗಳೂರಿಗೆ ಚಲಿಸುತ್ತಿದ್ದ 42 ರೂಟ್ ನಂಬರಿನ ಸೈಂಟ್ ಅಂತೋನಿ ಖಾಸಗಿ ಸಿಟಿ ಬಸ್ಸಲ್ಲಿ ಕಿಕ್ಕಿರುದು ಪ್ರಯಾಣಿಕರು ಪ್ರಯಾಣಿಸುತ್ತಿರುವುದನ್ನು ಬಸ್ಸನ್ನು ಹಿಂಬಾಲಿಸುತ್ತಿದ್ದ ಕಾರಿನ ಪ್ರಯಾಣಿಕರು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿದ್ದಾರೆ.ಬಸ್ಸು ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ಬಸ್ಸು ತಂಗುದಾಣದಲ್ಲಿ ಬ್ರೇಕ್ ಹೊಡೆದು ನಿಂತಾಗ ಬಸ್ಸಿನ ಫುಟ್ ಬೋರ್ಡಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಯು ರಸ್ತೆಗೆಸೆಯಲ್ಪಟ್ಟಿದ್ದಾನೆ.ಬಸ್ಸಿಂದ ಕೆಳಗೆ ಬಿದ್ದ ವಿದ್ಯಾರ್ಥಿಗೆ ಅದೃಷ್ಟವಶಾತ್ ಏನೂ ಆಗಿಲ್ಲ.ಈ ದೃಶ್ಯವು ಕಾರು ಪ್ರಯಾಣಿಕರ ಮೊಬೈಲಲ್ಲಿ ರೆಕಾರ್ಡ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಲ ಪ್ರದೇಶಗಳಿಗೆ ಸಮರ್ಪಕ ಬಸ್ಸುಗಳಿಲ್ಲದೆ ಬೆಳಗ್ಗೆ ಶಾಲೆ ,ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಕ್ಲಾಸಿಗೆ ತಡವಾಗುವುದರಿಂದ ಸಿಕ್ಕ ಬಸ್ಸುಗಳ ಫುಟ್ ಬೋರ್ಡಲ್ಲೇ ನೇತಾಡಿಕೊಂಡು ಪ್ರಯಾಣಿಸುತ್ತಾರೆ.ಎರಡು ವರುಷಗಳ ಹಿಂದೆ ಉಳ್ಳಾಲ ಬೈದೆರೆ ಪಾಲು ನಿವಾಸಿ ಪ್ರಥಮ ಪಿಯುಸಿ ವಿದ್ಯಾರ್ಥಿ ಯಶರಾಜ್ ಖಾಯಂ ಬಸ್ಸು ತಪ್ಪಿದ ಹಿನ್ನಲೆಯಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸಿ ಕಲ್ಲಾಪು ಅಡಂ ಕುದ್ರು ಎಂಬಲ್ಲಿ ರಸ್ತೆಗೆಸೆಯಲ್ಪಟ್ಟು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ.ಈ ಘಟನೆಯ ನಂತರವೂ ಟ್ರಾಫಿಕ್ ಪೊಲೀಸರು ನಿಯಮ ಮೀರಿ ಪ್ರಯಾಣಿಕರನ್ನು ತುಂಬಿಸಿ ಪ್ರಯಾಣಿಸುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಕ್ರಮ ಕೈಗೊಂಡಿಲ್ಲ.ಬದಲಾಗಿ ಹೆದ್ದಾರಿಗಳಲ್ಲಿ ಅಡ್ಡಲಾಗಿ ನಿಂತು ವಾಹನಗಳನ್ನ ಅಡ್ಡಹಾಕಿ ಹಿರಿಯ ಅಧಿಕಾರಿಗಳು ದಿನಂಪ್ರತಿ ನೀಡುವ “ಟಾರ್ಗೆಟ್ 40” ಕೇಸುಗಳ ಟಾಸ್ಕನ್ನು ಪೂರ್ತಿಗೊಳಿಸುವುದರಲ್ಲೇ ಟ್ರಾಫಿಕ್ ಪೊಲೀಸರು ಬ್ಯುಸಿಯಾಗಿರುತ್ತಾರೆ.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಓಡಾಡುವ ಸಿಟಿ ಬಸ್ಸುಗಳಲ್ಲಿ ಬೆಳಗ್ಗಿನ ಹೊತ್ತು ಈ ದೃಶ್ಯ ಸರ್ವೇ ಸಾಮಾನ್ಯವಾಗಿದೆ.ಅಪಘಾತ ನಡೆದ ಸಂದರ್ಭದಲ್ಲಿ ಮಾತ್ರ ಬಸ್ಸಿಗೆ ಬಾಗಿಲು ಅಳವಡಿಸಬೇಕು,ಕಾನೂನು ಉಲ್ಲಂಘಿಸುವ ಬಸ್ಸು ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಬರುತ್ತದೆ.ಕೆಲ ದಿನಗಳ ಬಳಿಕ ಎಲ್ಲರೂ ಎಲ್ಲವನ್ನೂ ಮರೆತು ಸುಮ್ಮನಾಗುತ್ತಾರೆ.ಬರೀ ಹೆಲ್ಮೆಟು ,ಹಳೆಯ ದಂಡ ವಸೂಲಿಯಲ್ಲೇ ಬ್ಯುಸಿ ಆಗಿರುವ ಟ್ರಾಫಿಕ್ ಪೊಲೀಸರು ಫುಟ್ ಬೋರ್ಡಲ್ಲಿ ಅಪಾಯಕಾರಿ ಪ್ರಯಾಣದಂತಹ ಜ್ವಲಂತ ಸಮಸ್ಯೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ಮುಂದೆ ನಡೆಯುವ ಅವಘಡಗಳಿಗೆ ಪೊಲೀಸರೆ ನೇರ ಕಾರಣರಾಗುತ್ತಾರೆ.ಅನೇಕ ಬಸ್ಸು ಚಾಲಕರು ,ನಿರ್ವಾಹಕರಲ್ಲಿ ಲೈಸೆನ್ಸೇ ಇರುವುದಿಲ್ಲ ಇದನ್ನೆಲ್ಲ ಪೊಲೀಸರು ಪತ್ತೆ ಹಚ್ಚ ಬೇಕೆಂದು ಸಾಮಾಜಿಕ ಕಾರ್ಯಕರ್ತ ಯಶು ಪಕ್ಕಳ ಅವರು ಆಗ್ರಹಿಸಿದ್ದಾರೆ.