ಹೊಸದಿಂತ ವರದಿ, ಮೈಸೂರು:
ತಮಿಳುನಾಡಿಗೆ ನಿತ್ಯವೂ 15 ದಿನಗಳ ಕಾಲ 3 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ಹರಿಸಬೇಕೆಂದು ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದ ರಾಜ್ಯ ಸರ್ಕಾರ, ಇದೀಗ ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನು ದಿಢೀರನೇ ಒಂದು ಪಟ್ಟು ಹೆಚ್ಚಿಸಿದೆ. ಇದರಿಂದಾಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣಕ್ಕಿಂತ ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವೇ ದುಪ್ಪಾಟಾಗಿದ್ದು, ಜಲಾಶಯದ ನೀರಿನ ಮಟ್ಟ ಕುಸಿಯಲಾರಂಭಿಸಿದೆ.
ಕಳೆದ ಎರಡುದಿನಗಳ ಹಿಂದೆ ಅಂದರೆ ಅ.7 ರಂದು ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ನದಿಯ ಮೂಲಕ ತಮಿಳುನಾಡಿಗೆ ಒಂದು ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿತ್ತು. ಇದೀಗ ಸೋಮವಾರ ಬೆಳಗ್ಗೆಯಿಂದ ಏಕಾಏಕಿ 2 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
ಕೆ.ಆರ್‌ಎಸ್ ಜಲಾಶಯದಿಂದ 2962 ಕ್ಯೂಸೆಕ್ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿತ್ತು. ಅಲ್ಲಿಗೆ ಕಬಿನಿ, ಕೆ.ಆರ್.ಜಲಾಶಯದಿಂದ ಒಟ್ಟು ತಮಿಳುನಾಡಿಗೆ 3962 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು. ಆದರೆ ತಮಿಳುನಾಡಿಗೆ ಹರಿಸಬೇಕಾದ ನೀರಿಗಿಂತ ಹೆಚ್ಚಾಗಿ 962 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿತ್ತು. ಆದರೆ ಇದೀಗ ಕೆಆರ್‌ಎಸ್ ಜಲಾಶಯದಿಂದ ಹರಿಸಲಾಗುತ್ತಿರುವ ನೀರಿನ ಪ್ರಮಾಣವನ್ನು ಏಕಾಏಕಿ 5973 ಕ್ಯೂಸೆಕ್‌ಗೆ ಹೆಚ್ಚಿಸಲಾಗಿದೆ. ಇದರಲ್ಲಿ ನಾಲೆಗಳಿಗೆ ಬಿಡುತ್ತಿರುವ ನೀರಿನ ಪ್ರಮಾಣವೂ ಸೇರಿದೆ ಎಂದು ಜಲಾಶಯದ ಅಧಿಕಾರಿಗಳು ನೀಡಿರುವ ಮಾಹಿತಿಯಲ್ಲಿ ತಿಳಿಸಿದ್ದಾರೆ. ಆದರೆ ಏಕಾಏಕಿ ನೀರಿನ ಹೊರ ಹರಿವು ಪ್ರಮಾಣವನ್ನು ದುಪ್ಪಟ್ಟು ಮಾಡಿದ್ದು ಯಾಕೇ ಪ್ರಶ್ನೆಗೆ ಬಾಯಿ ಬಿಡುತ್ತಿಲ್ಲ. ಸದ್ಯ ಕೆ.ಆರ್.ಜಲಾಶಯಕ್ಕೆ 3503 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ನೀರಿನೊಂದಿಗೆ ಜಲಾಶಯದಲ್ಲಿದ್ದ ನೀರಿನಲ್ಲಿ ಹೆಚ್ಚಾಗಿ 2473 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದಾಗಿ ಜಲಾಶಯದ ನೀರಿನ ಸಂಗ್ರಹದಲ್ಲಿ ಒಂದು ಅಡಿ ಕುಸಿದಿದೆ. ಸದ್ಯ ಈ ಜಲಾಶಯದ ನೀರಿನ ಮಟ್ಟ 100.92 ಅಡಿ ಇದ್ದು, 15 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.
ಕಬಿನಿ ಜಲಾಶಯಕ್ಕೆ ಸದ್ಯ 1261 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 2 ಸಾವಿರ ಕ್ಯೂಸೆಕ್ ನೀರನ್ನು ನದಿಯ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ. ಆದರೆ ನಾಲೆಗಳಿಗೆ ಹನಿ ನೀರನ್ನೂ ಬಿಡುತ್ತಿಲ್ಲ. ಸದ್ಯ ಈ ಜಲಾಶಯದಲ್ಲಿ ನೀರಿನ ಮಟ್ಟ 2276 ಅಡಿ ಇದೆ. 5.29 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ.
ತಮಿಳುನಾಡಿನ ನಿರ್ಣಯಕ್ಕೆ ಬೆದರಿತಾ ರಾಜ್ಯ ಸರ್ಕಾರ
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕರ್ನಾಟಕದಿಂದ ಕಾವೇರಿ ನೀರನ್ನು ಬಿಡಬೇಕೆಂದು ತಮಿಳುನಾಡು ವಿಧಾನಸಭೆಯಲ್ಲಿ ಸೋಮವಾರ ನಿರ್ಣಯವನ್ನು ಅಂಗೀಕರಿಸಲಾಗಿದೆ. ಇದರ ಬೆನ್ನಲ್ಲೇ ಕೆಆರ್‌ಎಸ್, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ರಾಜ್ಯ ಸರ್ಕಾರ ದುಪ್ಪಟ್ಟು ಮಾಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ರಾಜ್ಯ ಸರ್ಕಾರ ತಮಿಳುನಾಡಿನ ವಿಧಾನಸಭೆ ನಿರ್ಣಯಕ್ಕೆ ಬೆದರಿತೆ ಎಂಬ ಪ್ರಶ್ನೆ ಕಾವೇರಿ ನೀರಿನ ಉಳಿವಿಗಾಗಿ ಕಳೆದ ಎರಡು ತಿಂಗಳಿoದ ಹೋರಾಟ ಮಾಡುತ್ತಿರುವ ಹೋರಾಟಗಾರರನ್ನು ಕಾಡುತ್ತಿದೆ. ತಮಿಳುನಾಡಿಗೆ ಬಿಡುತ್ತಿರುವ ನೀರಿನ ಪ್ರಮಾಣವನ್ನು ದುಪ್ಪಟ್ಟು ಮಾಡಿದ್ದು ಯಾಕೇ, ಯಾರು ಈ ಆದೇಶವನ್ನು ನೀಡಿದರು ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.