ಹೊಸದಿಗಂತ ವರದಿ,ವಿಜಯನಗರ:
ನೂತನ ಜಿಲ್ಲೆ ಉದಯವಾದ ಬಳಿಕ ಅಭಿವೃದ್ಧಿಗಾಗಿ 700-800 ಕೋಟಿ ರೂ.ಅನುದಾನ ತಂದಿರುವೆ, ಎಲ್ಲವೂ ಸದ್ಬಳಕೆಯಾಗಬೇಕು, ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಸಂಪುಟದಲ್ಲಿ ಒಪ್ಪಿಗೆ ದೊರೆತಿದ್ದು, ಈ ವಿಚಾರದಲ್ಲಿ ರಾಜಕೀಯ ಬೆಳೆಸುವುದು ಬೇಡ, ಸಿದ್ದೇಶ್ವರ ಅವರ ಬದಲು ಸ್ಥಳೀಯರಿಗೆ ನೀಡಲಾಗುವುದು ಶಾಸಕರು ಹೇಳುತ್ತಿದ್ದು, ಯಾರೂ ಮುಂದೆ ಬರದಿದ್ದರೇ ಸರ್ಕಾರದಿಂದ 150 ಎಕರೆ ಸ್ಥಳ ನೀಡಿದರೇ ನಾನೇ ಹೈಟೆಕ್ ಮಾದರಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸುವೆ ಎಂದು ಮಾಜಿ ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಸಮೀಪದ ಕಮಲಾಪೂರ್ ಪಟ್ಟಣದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಕ್ಕರೆ ಕಾರ್ಖಾನೆಗೆ ಅವಧಿಯಲ್ಲಿ ನಿಗಧಿಪಡಿಸಿದ ಸ್ಥಳದಲ್ಲಿ ಬಡವರಿಗೆ ನಿವೇಶನಗಳನ್ನು ಮಾಡಿ ಬೇರೆ ಸ್ಥಳದಲ್ಲಿ ನಿರ್ಮಿಸಲಾಗುವುದು ಎಂದು ಶಾಸಕರು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ. ಸ್ಥಳ ಎಲ್ಲೇಯಾದರೂ ಸರಿ ಕಾರ್ಖಾನೆ ನಿರ್ಮಾಣವಾಗಬೇಕು, ಸ್ಥಳೀಯರಿಗೆ ಉದ್ಯೋಗ, ಕಬ್ಬು ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಆನಂದ್ ಸಿಂಗ್ ಅವರ ಪಾಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ, ಇದು ಶುದ್ಧ ಸುಳ್ಳು, ಕಾರ್ಖಾನೆ ವಿಚಾರದಲ್ಲಿ ನನ್ನ ಪಾತ್ರ ಏನೂ ಇಲ್ಲ, ಅವಧಿಯಲ್ಲಿ ಕಾರ್ಖಾನೆ ನಿರ್ಮಾಣಕ್ಕೆ 80 ಎಕರೆ ಸ್ಥಳವನ್ನು ಗುರುತಿಸಿ ಮಂಜೂರು ಮಾಡಿದ್ದು, ಸಂಪುಟ ಒಪ್ಪಿಗೆ ದೊರೆತಿದೆ, ಸುಸಜ್ಜಿತವಾಗಿ ನಿರ್ಮಿಸಲು 80 ಎಕರೆ ಸಾಲೋಲ್ಲ ಎನ್ನುವುದು ಗೊತ್ತಿದೆ, ಈ ಸ್ಥಳದ ಬಳಿ ಆರ್ ಬಿಎಸ್ ಎಸ್ ಎನ್ ಕಂಪನಿಗೆ ನೀಡಿದ 80 ಎಕರೆ ಲೀಸ್ ಅಗ್ರಿಮೆಂಟ್ ಈ ವರ್ಷ ಮುಕ್ತಾಯಗೊಳ್ಳಲಿದೆ, ಈ ಸ್ಥಳದಲ್ಲಿ ಸುಸಜ್ಜಿತವಾಗಿ ಸಕ್ಕರೆ ಕಾರ್ಖಾನೆ ನಿರ್ಮಿಸಬಹುದು ಎಂದು ಅಂದಾಜಿಸಲಾಗಿತ್ತು. ಈ ಸ್ಥಳ ಬೇಡ ಅಂದರೇ ಕ್ಷೇತ್ರದಲ್ಲಿ ಎಲ್ಲೇ ಮಾಡಿದರೂ ಸ್ವಾಗತವಿದೆ. ಸ್ಥಳೀಯರು ನಿರ್ಮಿಸಬೇಕು ಎನ್ನುವ ಶಾಸಕರ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಯಾರೂ ಮುಂದೆ ಬಾರದಿದ್ದರೇ ನಾನೇ ಕಾರ್ಖಾನೆ ನಿರ್ಮಿಸಲು ಸಿದ್ದನಿರುವೆ, ಒಟ್ಟಿನಲ್ಲಿ ನನ್ನ ಕ್ಷೇತ್ರದ ಜನರಿಗೆ ಅನುಕೂಲವಾಗಬೇಕು, ಕ್ಷೇತ್ರದ ನಾಲ್ಕೂ ದಿಕ್ಕಿನ ಯಾವುದೇ ಸ್ಥಳದಲ್ಲಿ ನೀಡಿದರೂ, ಭುವನೇಶ್ವರಿ ಶುಗರ್ಸ್ ಎನ್ನುವ ಹೆಸರಿನಲ್ಲಿ ಕಾರ್ಖಾನೆ ನಿರ್ಮಿಸಲು ಸಿದ್ದನಿರುವೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ದ್ವೇಷದ ರಾಜಕಾರಣ ಮಾಡುವುದು ಬೇಡ, ಕ್ಷೇತ್ರದ ಜನರಿಗೆ ಅಷ್ಟೇ ಅಲ್ಲ ನನಗೂ ಶಾಸಕರೇ ಅವರು, ಗವಿಯಪ್ಪ ಅವರ ಬಗ್ಗೆ ಅಪಾರ ಗೌರವವಿದೆ, ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಬೆಂಬಲ ಯಾವಾಗಲೂ ಇರಲಿದೆ ಎಂದರು. ಅವಧಿಯಲ್ಲಿ ನೂತನ ಜಿಲ್ಲೆಯ ಅಭಿವೃದ್ಧಿ 700-800 ಕೋಟಿ ರೂ.ಅನುದಾನ ತಂದಿರುವೆ, (ಎಡಿಎಂ)ಗೆ ಹಣ ಜಮಾ ಆಗಿದ್ದರೂ ಕಾಮಗಾರಿಗಳಿಗೆ ವೇಗ ಸಿಗುತ್ತಿಲ್ಲ, ಹಂಪಿಯ ಸ್ನಾನಘಟ್ಟಕ್ಕೆ 18 ಕೋಟಿ ರೂ., ಬಳ್ಳಾರಿ-ಇಂಗಳಗಿ ರಸ್ತೆ ಅಭಿವೃದ್ಧಿಗೆ 30 ಕೋಟಿ ರೂ., ಗುರುಭವನ ನಿರ್ಮಾಣಕ್ಕೆ 5 ಕೋಟಿ ರೂ., ರೈಲ್ವೆ ಭವನಕ್ಕೆ 5 ಕೋಟಿ ರೂ., ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿದೆ. ವಿಶೇಷವಾಗಿ ನಗರದಲ್ಲಿ ಮೆಡಿಸಿಡಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಕನಸು ನನ್ನದು, ಇದಕ್ಕಾಗಿ 50 ಎಕರೆ ಸ್ಥಳ ಗುರುತಿಸಲಾಗಿದ್ದು, ಕೂಡಲೇ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಬೇಸರ ತಂದಿದೆ: ಸಾರ್ವಜನಿಕ ಜೀವನದಲ್ಲಿ ವಿನಾಕಾರಣ ಸುಳ್ಳು ಆರೋಪಗಳು ಬಂದರೇ ಸಹಿಸಿಕೊಳ್ಳಲು ಆಗೋಲ್ಲ, ಮಾಡದ ತಪ್ಪಿಗೆ ಸುಳ್ಳು ಆರೋಪ ಹೊರೆಸಿಕೊಂಡು ಇರಲು ನನ್ನಿಂದಿರಲು ಸಾಧ್ಯವಿಲ್ಲ. ಎಲ್ಲ ರೀತಿಯಿಂದ ಬೇಸತ್ತು, ರಾಜಕಾರಣದಿಂದ ದೂರ ಇರಲು ನಿರ್ಧರಿಸಿದ್ದೇನೆ. ನಾನು ಮೂಲತಃ ಉದ್ಯಮಿ, ಕಳೆದ 15 ವರ್ಷದಿಂದ ನನ್ನ ಕ್ಷೇತ್ರವನ್ನು ನನ್ನ ಮನೆಯಂತೆ ಕಟ್ಟಿಕೊಂಡು ಬಂದಿರುವೆ, ನುಡಿದಂತೆ ನೂತನ ಜಿಲ್ಲೆ ತಂದಿರುವೆ, ಎಲ್ಲರೂ ಸಂತಸದಿಂದ ಇದ್ದಾರೆ, ಡಿಸಿ, ಎಸಿ, ಎಸ್ಪಿ ಸೇರಿದಂತೆ ವಿವಿಧ ಕಚೇರಿಗಳು ದೂರವಾಗಿದ್ದವು, ಸದ್ಯ ಎಲ್ಲರ ಕೆಲಸಗಳು ಸುಗಮವಾಗಿ ನಡೆಯುತ್ತಿವೆ, ಪ್ರತಿಷ್ಟೆಗೆ ಹೋಗಿ ಜನರಿಗೆ ಅನ್ಯಾಯ ಮಾಡುವುದು ಬೇಡ, ಅಭಿವೃದ್ಧಿ ವಿಚಾರದಲ್ಲಿ ಎಲ್ಲ ರೀತಿಯ ಸಹಕಾರ ನನ್ನದಿರಲಿದೆ ಎಂದರು.