ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಮಹಿಳೆಯ ಮೃತದೇಹ ತುಂಬಿದ ಸೂಟ್‌ಕೇಸ್ ಪತ್ತೆಯಾಗಿದೆ. ಮೃತ ಮಹಿಳೆಯ ವಯಸ್ಸು ಸುಮಾರು 25 ರಿಂದ 30 ವರ್ಷ ಎಂದು ಪೊಲೀಸರು ಅಂದಾಜಿಸಿದ್ದಾರೆ.
ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಜನ ಈ ಸೂಟ್‌ಕೇಸ್ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಸೂಟ್‌ಕೇಸ್ ಪರಿಶೀಲಿಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯ ಮೃತದೇಹದ ಮೇಲೆ ಅಲ್ಲಲ್ಲಿ ಗಾಯದ ಗುರುತುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಟ್‌ಕೇಸ್ ಪತ್ತೆಯಾದ ಸ್ಥಳದಲ್ಲಿ ಪೊಲೀಸರು ಹಾಗೂ ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹದ ಜೊತೆಗೆ ಬಟ್ಟೆಗಳು ಸಹ ಅದರಲ್ಲಿದ್ದವು. ಅವುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.