ಅಚ್ಚರಿ ಮೂಡಿಸಿದೆ ಘಟನೆ | ದಿನ ಎರಡು ಕಳೆದರೂ ಸ್ಥಳ ಬಿಟ್ಟು ಕದಲದ ಕೋಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೋಡಿಂಬಾಳ ಸಮೀಪದ ಪುಳಿಕುಕ್ಕು ಮುರಚೆಡವು ಬಳಿ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಗೌಡ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದು ೨ ದಿನ ಕಳೆದರೂ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಮಾತ್ರ ಘಟನೆ ನಡೆದ ಸ್ಥಳವನ್ನು ಬಿದ್ದು ಕದಲಿಲ್ಲ.

ಸೀತಾರಾಮ ಅವರು ದೀಪಾವಳಿ ಪ್ರಯುಕ್ತ ಎಡಮಂಗಲದ ತನ್ನ ಮನೆಯಲ್ಲಿ ನಡೆಯಲಿದ್ದ ದೈವದ ಹರಕೆಗಾಗಿ ಕೋಡಿಂಬಾಳದಿಂದ ಕೋಳಿ ತೆಗೆದುಕೊಂಡು ಸ್ಕೂಟಿಯಲ್ಲಿ ಎಡಮಂಗಲದತ್ತ ಹೋಗುತ್ತಿದ್ದ ವೇಳೆ ನ. ೨ ರಂದು ಬೆಳಗ್ಗೆ ರಸ್ತೆ ಪಕ್ಕದ ದೂಪದ ಮರ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿದ್ದರು.

ಘಟನೆಯ ವೇಳೆ ಅವರು ಸ್ಕೂಟಿಯಲ್ಲಿ ಕೊಂಡೊಯ್ಯುತ್ತಿದ್ದ ಕೋಳಿ ಹಗ್ಗದಿಂದ ಕಾಲುಗಳನ್ನು ಕಟ್ಟಿದ್ದರಿಂದ ಮೃತದೇಹದ ಬಳಿಯೇ ಬಿದ್ದಿತ್ತು. ಬಳಿಕ ಸ್ಥಳದಲ್ಲಿದ್ದವರು ಕೋಳಿಯ ಕಾಲಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಿ ಬಿಟ್ಟಿದ್ದರು.

ಆಗ ಹತ್ತಿರದ ಕಾಡಿನೊಳಗೆ ಹೋಗಿದ್ದ ಕೋಳಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದ ಜನರು ಚದುರಿದ ಬಳಿಕ ಮರಬಿದ್ದು ನಜ್ಜುಗುಜ್ಜಾಗಿದ್ದ ಸೀತಾರಾಮ ಅವರ ಸ್ಕೂಟಿಯ ಮೇಲೆ ಬಂದು ಕುಳಿತಿತ್ತು. ಜನರು ಹತ್ತಿರ ಬಂದಾಗ ಪಕ್ಕದ ಮರದ ರೆಂಬೆಯ ಮೇಲೆ ಆಶ್ರಯ ಪಡೆಯುತ್ತಿರುವ ಕೋಳಿ ೨ ದಿನ ಕಳೆದರೂ ಘಟನ ಸ್ಥಳ ಬಿಟ್ಟು ಹೋಗದಿರುವುದು ಜನರ ಸೋಜಿಗಕ್ಕೆ ಕಾರಣವಾಗಿದೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!