ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾದಲ್ಲಿ ಹಿಂದು ಮಂದಿರದ ಮೇಲೆ ಉದ್ದೇಶಪೂರ್ವಕವಾಗಿ ನಡೆಸಿದ ಹಿಂಸಾಚಾರ ಮತ್ತು ಭಾರತೀಯ ರಾಜತಾಂತ್ರಿಕರನ್ನು ಬೆದರಿಸುವ ಪ್ರಯತ್ನಗಳನ್ನು ಪ್ರಧಾನಿ ಮೋದಿ ಖಂಡಿಸಿದ್ದಾರೆ.
ಕೆನಡಾ ಸರ್ಕಾರ ನ್ಯಾಯ ಖಚಿತಪಡಿಸಿಕೊಳ್ಳಬೇಕು ಮತ್ತು ಅಂತಾರಾಷ್ಟ್ರೀಯ ಕಾನೂನುಗಳನ್ನು ಪಾಲಿಸಬೇಕು ಎಂದು ಮೋದಿ ಸಂದೇಶ ರವಾನಿಸಿದ್ದಾರೆ.
ಕೆನಡಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿ ಮೋದಿ ಎಕ್ಸ್ (ಟ್ವಿಟರ್) ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. “ಕೆನಡಾದಲ್ಲಿ ಹಿಂದು ಮಂದಿರದ ಮೇಲೆ ಉದ್ದೇಶಪೂರ್ವಕವಾಗಿ ನಡೆಸಿದ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಮ್ಮ ರಾಜತಾಂತ್ರಿಕರನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಅಷ್ಟೇ ಭಯಾನಕವಾಗಿವೆ. ಇಂತಹ ಹಿಂಸಾಚಾರಗಳು ಭಾರತದ ಸಂಕಲ್ಪವನ್ನು ಎಂದಿಗೂ ದುರ್ಬಲಗೊಳಿಸುವುದಿಲ್ಲ. ಕೆನಡಾ ಸರ್ಕಾರ ನ್ಯಾಯ ಖಚಿತಪಡಿಸಿಕೊಳ್ಳುತ್ತದೆ ಮತ್ತು ಕಾನೂನು ಪಾಲನೆ ಮಾಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ” ಎಂದು ಮೋದಿ ಖಡಕ್ ಸಂದೇಶ ನೀಡಿದ್ದಾರೆ.
ಹಿಂದುಗಳ ಮೇಲೆ ಖಲಿಸ್ತಾನಿ ಕಿಡಿಗೇಡಿಗಳು ದಾಳಿ
ಖಲಿಸ್ತಾನಿ ಬೆದರಿಕೆ ಮತ್ತು ಹಿಂದು ವಿರೋಧಿ ದ್ವೇಷವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಹಿಂದುಗಳ ಮೇಲೆ ಖಲಿಸ್ತಾನಿ ಕಿಡಿಗೇಡಿಗಳು ದಾಳಿ ನಡೆಸಿದ್ದಾರೆ.ಬ್ರಾಂಪ್ಟನ್‌ನಲ್ಲಿರುವ ಹಿಂದು ದೇವಾಲಯದ ಆವರಣದಲ್ಲಿ ಉತ್ತರ ಅಮೆರಿಕಾದ ಹಿಂದುಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.
ಈ ವಿಡಿಯೋವನ್ನು ಹಂಚಿಕೊಂಡಿರುವ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ, ಇಂದು ಕೆನಡಿಯನ್ ಖಲಿಸ್ತಾನಿಗಳು ತಮ್ಮ ಎಲ್ಲೆ ಮೀರಿದ್ದಾರೆ. ಬ್ರಾಂಪ್ಟನ್‌ನಲ್ಲಿನ ಹಿಂದು ಸಭಾ ದೇವಸ್ಥಾನದ ಆವರಣದ ಒಳಗೆ ಹಿಂದು ಕೆನಡಿಯನ್ ಭಕ್ತರ ಮೇಲಿನ ಖಲಿಸ್ತಾನಿಗಳ ದಾಳಿಯು ಕೆನಡಾದಲ್ಲಿ ಖಲಿಸ್ತಾನಿ ಹಿಂಸಾ ಉಗ್ರವಾದವು ಎಷ್ಟು ಆಳವಾಗಿದೆ ಹಾಗೂ ಮಿತಿಮೀರಿದೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಪ್ರತಿಭಟನೆ ನಡೆಸಿದ ಮೂವರು ಖಲಿಸ್ತಾನಿ ವಿರೋಧಿಗಳನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಕ್ರಿಮಿನಲ್ ಆರೋಪದಡಿ ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೀಲ್ ಪ್ರಾದೇಶಿಕ ಪೊಲೀಸರು ಸೋಮವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.