ಅಗಲಿದ ಯೋಧನಿಗೆ ಕಣ್ಣೀರ ವಿದಾಯ: ಸಕಲ ಸೇನಾ ಗೌರವದೊಂದಿಗೆ ಅಂತಿಮ ಸಂಸ್ಕಾರ

ಹೊಸದಿಗಂತ ವರದಿ, ಭಾಗಮಂಡಲ:

ಭಾರತೀಯ ಸೇನೆಯ ಬೆಂಗಳೂರಿನ ಎಂಇಜಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕರೊಬ್ಬರು ಅನಾರೋಗ್ಯಕ್ಕೆ ಒಳಗಾಗಿ ಶುಕ್ರವಾರ ಸಾವಿಗೀಡಾಗಿದ್ದು, ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶನಿವಾರ ಅವರ ಹುಟ್ಟೂರಾದ ಅಯ್ಯಂಗೇರಿಯಲ್ಲಿ ಸಕಲ ಸೇನಾ ಗೌರವದೊಂದಿಗೆ ನೆರವೇರಿತು.

ಕಳೆದ 11 ವರ್ಷಗಳಿಂದ ನಾಯಕ್ ಆಗಿ ಸೇನೆಯಯಲ್ಲಿ ಸೇವೆ ಸಲ್ಲಿಸುತ್ತಿದ್ದ ಭಾಗಮಂಡಲ ಸಣ್ಣಪುಲಿಕೋಟು ಗ್ರಾಮದ ಉದಿಯನ ಜಿತಿನ್ (31) ಅವರು ಪ್ಯಾರಾಚೂಟ್ ತರಬೇತಿ ಸಂದರ್ಭ ಬಿದ್ದು ಕಿಡ್ನಿಗೆ ತೊಂದರೆಯಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.
ತರಬೇತಿ ಮುಕ್ತಾಯ ಹಂತದಲ್ಲಿದ್ದ ಕೊನೆಯ ದಿನ ಓಟದ ಸಂದರ್ಭ ಮತ್ತೆ ಕಿಡ್ನಿ ಸಮಸ್ಯೆ ಉಲ್ಪಣಿಸಿ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿ‌ ಸೇನಾ ಆಸ್ಪತ್ರೆಯಲ್ಲಿ ಶುಕ್ರವಾರ ಕೊನೆಯುಸಿರೆಳೆದಿದ್ದರು.

ಅಂದು ಸಂಜೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ 27 ಮಂದಿ ಯೋಧರೊಂದಿಗೆ ಶನಿವಾರ ಬೆಳಗಿನ ಜಾವ ಮೂರು ಗಂಟೆ ವೇಳೆಗೆ ಮೃತದೇಹ ಮನೆ ತಲುಪಿತು. ಬೆಳಗ್ಗೆ 9 ಗಂಟೆಯಿಂದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಿದ್ದ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಸಾವಿರಾರು ಮಂದಿ ಪಡೆದು ನಮನ ಸಲ್ಲಿಸಿದರು.

ಮಾಜಿ ಶಾಸಕ ಕೊಂಬಾರನ ಜಿ. ಬೋಪಯ್ಯ, ಗ್ರಾಮ ಪಂಚಾಯಿತಿ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ, ಭಾಗಮಂಡಲ ಗ್ರಾಮ ಪಂಚಾಯಿತಿ ಸದಸ್ಯರಾದ ಹೊಸೂರು ಸತೀಶ್ ಕುಮಾರ್, ಕುಯ್ಯಮುಡಿ ರಂಜು, ದಂಡಿನ ಜಯಂತ್, ಜಿಲ್ಲಾಡಳಿತದ ಪರವಾಗಿ ತಹಶೀಲ್ದಾರ್ ಪ್ರವೀಣ್ ಕುಮಾರ್, ಆರ್.ಐ ಅನೂಪ್ ಸಬಾಸ್ಟಿನ್, ಭಾಗಮಂಡಲ ಠಾಣಾಧಿಕಾರಿ ಶೋಭಾ ಲಮಾಣಿ ಅವರು ಅಂತಿಮ ದರ್ಶನ ಮಾಡಿ ಗೌರವ ಸಲ್ಲಿಸಿದರು. ಬಳಿಕ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮೂರು ಬಾರಿ ಕುಶಲತೋಪು ಹಾರಿಸಿ ಅಂತಿಮ ನಮನ ಸಲ್ಲಿಸಲಾಯಿತು.
ಪಾರ್ಥೀವ ಶರೀರದೊಂದಿಗೆ ಆಗಮಿಸಿದ ಸೇನಾಧಿಕಾರಿಗಳು ಗೌರವ ನಮನ ಸಲ್ಲಿಸಿದ ಬಳಿಕ ಗೌಡ ಸಂಸ್ಕೃತಿಯೊಂದಿಗೆ ವಿಧಿ ವಿಧಾನಗಳನ್ನು ನೆರವೇರಿಸಿ ಅಂತಿಮ ಸಂಸ್ಕಾರ ಕೈಗೊಳ್ಳಲಾಯಿತು. ಪಾರ್ಥೀವ ಶರೀರದ ಜೊತೆಯಲ್ಲಿ ಆಗಮಿಸಿದ್ದ ಸೇನಾಧಿಕಾರಿಗಳು ಪತ್ನಿ ವನಿತಾ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದ ಬಳಿಕ ಗೌರವ ಸಲ್ಲಿಸಿ, ಅಗ್ನಿಸ್ಪರ್ಶ ಮಾಡುವುದರೊಂದಿಗೆ ಜಿತಿನ್ ದೇಹ ಪಂಚಭೂತಗಳಲ್ಲಿ ಲೀನವಾಯಿತು.

‘ಏಳೇಳು ಜನ್ಮಕ್ಕೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸು. ನಿನ್ನ ಜೊತೆಯಲ್ಲಿ ನಾನಿರುವೆ ಎಂದು ಹೇಳುತ್ತಾ ಪತ್ನಿ ವನಿತಾ, ಜತಿನ್ ಅವರ ಭಾವಚಿತ್ರವನ್ನು ಎದೆಗೆ ಅಪ್ಪಿಕೊಂಡು ರೋದಿಸುತ್ತಿದ್ದ ದೃಶ್ಯ ನೆರೆದಿರುವವರ ಮನಕಲಕುವಂತಿತ್ತು .

ಗಡಿ ಭಾಗದ ಕುಶಾಲನಗರದಲ್ಲಿ ಮಾಜಿ ಸೈನಿಕರು ಹಾಗೂ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಪಾರ್ಥೀವ ಶರೀರವನ್ನು ಬರಮಾಡಿಕೊಂಡು ಅಂತಿಮ ನಮನ ಸಲ್ಲಿಸಿದರು. ಅಯ್ಯಂಗೇರಿ ಗ್ರಾಮ ಪಂಚಾಯಿತಿ ವತಿಯಿಂದಲೂ ಗೌರವ ನಮನ ಸಲ್ಲಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!