ಬರಗಾಲ ಘೋಷಣೆ ತಡವಾಗಲು ಕೇಂದ್ರ ಸರ್ಕಾರ ಕಾರಣ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬರಗಾಲದ ಘೋಷಣೆ ತಡವಾಗಲು ಕೇಂದ್ರ ಸರ್ಕಾರದ ಬರನಿರ್ವಹಣೆ ಕೈಪಿಡಿ -2020 ಮಾನದಂಡಗಳಲ್ಲಿನ ಸಮಸ್ಯೆಗಳ ಕಾರಣ. ಈ ಮಾನದಂಡಗಳನ್ನು ಬದಲಾವಣೆ ಮಾಡದಿದ್ದರೆ ಬರಪೀಡಿತ ಪ್ರದೇಶದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿ ನೊಂದ ಜನರಿಗೆ ನೆರವಾಗಲು ಸಾಧ್ಯವಾಗದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಬರ ಘೋಷಣೆಗೆ ಅಗತ್ಯವಾಗಿರುವ ಮಾನದಂಡಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿ ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಅವರಿಗೆ ಹಿಂದೆಯೇ ಪತ್ರ ಬರೆದಿದ್ದರೂ ಕೇಂದ್ರ ಸರ್ಕಾರದಿಂದ ಇಲ್ಲಿಯ ವರೆಗೆ ಉತ್ತರ ಬಂದಿಲ್ಲ. ಬರಘೋಷಣೆಯ ಮಾನದಂಡಗಳ ಪರಿಷ್ಕರಣೆಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡಹೇರಬೇಕಾಗಿರುವ ರಾಜ್ಯದ ಬಿಜೆಪಿ ನಾಯಕರು ಆ ಕೆಲಸವನ್ನು ಮಾಡದೆ ರಾಜ್ಯದ ಬರ ಪರಿಸ್ಥಿತಿಯ ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ 14 ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಪ್ರತಿಯೊಂದು ವಲಯವೂ ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಪ್ರಸಕ್ತ ಇರುವ ಮಾನದಂಡಗಳು ಎಲ್ಲ ವಲಯಗಳಿಗೂ ಏಕರೂಪವಾಗಿದ್ದು, ಇದು ಬರ ಘೋಷಣೆಗೆ ಅಗತ್ಯವಾದ ಸೂಕ್ಷ್ಮಗಳು ಮತ್ತು ಬದಲಾವಣೆಗಳನ್ನು ಒಳಗೊಳ್ಳುವುದಿಲ್ಲ.ಹಾಗಾಗಿ, ವಲಯವಾರು ನಿರ್ದಿಷ್ಟವಾದ ಸೂಚ್ಯಂಕಗಳನ್ನು ಬರ ಘೋಷಣೆಗೆ ರೂಪಿಸುವುದು ಅಗತ್ಯವಾಗಿರುತ್ತದೆ ಎಂದಿದ್ದಾರೆ.

ಬರ ನಿರ್ವಹಣೆ ಕೈಪಿಡಿಯ ಮಾನದಂಡದಡಿ ಬೆಳೆಹಾನಿ ಸಹಾಯಧನಕ್ಕೆ ಅರ್ಹತೆಗೆ ಪಡೆಯಲು ಶೇ. 50 ರಷ್ಟು ಬೆಳೆಹಾನಿ ಪ್ರಮಾಣ ಅಗತ್ಯವಿರುತ್ತದೆ, ಈ ಪ್ರಮಾಣ ವಿಪತ್ತಿನ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಎಸ್ ಡಿ ಆರ್ ಎಫ್/ ಎನ್ ಡಿ ಆರ್ ಎಫ್ ಮಾನದಂಡಗಳ ಅಡಿ ಸೂಚಿಸಿರುವ ಶೇ.33 ಬೆಳೆ ನಾಶಕ್ಕೆ ವ್ಯತಿರಿಕ್ತವಾಗಿದೆ. ಹಾಗಾಗಿ, ಕೈಪಿಡಿಯಲ್ಲಿನ ಮಾನದಂಡವನ್ನು ಇದಕ್ಕೆ ಹೊಂದಾಣಿಕೆ ಮಾಡುವುದು ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ವಿಮಾ ಪರಿಹಾರ ಹಾಗೂ ಇನ್ಪುಟ್ ಸಬ್ಸಿಡಿಗಳನ್ನು ಜೋಡಿಸುವುದರಿಂದ ರೈತರಿಗೆ ಸಂಕಷ್ಟದ ಸಮಯದಲ್ಲಿ ಅತ್ಯಗತ್ಯವಾದ ಆರ್ಥಿಕ ಬೆಂಬಲವು ತ್ವರಿತವಾಗಿ ಒದಗಿಸಲು ಸಾಧ್ಯವಾಗುತ್ತದೆ. ಇದರಿಂದ ವಿಮಾ ಪರಿಹಾರಕ್ಕೆ ಸಂಬಂಧಿಸಿದ ಸಂಕೀರ್ಣ ಪ್ರಕ್ರಿಯೆಯಲ್ಲಿ ಸರಳತೆ ಸಾಧ್ಯವಾಗುವುದಲ್ಲದೆ, ಪಾರದರ್ಶಕತೆಯೂ ಮೂಡುತ್ತದೆ. ವಿಮೆಯ ಪರಿಹಾರ ದೊರೆಯುವಲ್ಲಿನ ವಿಳಂಬ ಕಡಿಮೆಯಾಗುತ್ತದೆ. ಮಾನದಂಡಗಳನ್ನು ಅನ್ವಯಿಸುವಾಗ, ಅದನ್ನು ಭೌಗೋಳಿಕವಾಗಿ, ಕೃಷಿ ಚಟುವಟಿಕೆ ಹಾಗೂ ಬೆಳೆಯ ವೈವಿಧ್ಯತೆಯ ಹಿನ್ನೆಲೆಯಲ್ಲಿ ಹೆಚ್ಚು ಹೊಂದಿಕೆಯಾಗುವಂತೆ, ಹೆಚ್ಚು ರೈತಸ್ನೇಹಿಯಾಗುವಂತೆ ಅಳವಡಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಸಕ್ತ ಇರುವ ಮಾನದಂಡಗಳಿಗೆ ಸೂಕ್ತ ಮಾರ್ಪಾಡುಗಳನ್ನು ಮಾಡಬೇಕಿದ್ದು, ಅವುಗಳನ್ನು ಮರುಪರಿಶೀಲನೆಗೆ ಒಡ್ಡಲು ಇದು ಸೂಕ್ತ ಸಮಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!