Friday, January 23, 2026
Friday, January 23, 2026
spot_img

ಇತಿಹಾಸದ ಕರಾಳ ದಿನಕ್ಕೆ ಸಾವಿರ ವರುಷ: ಸೋಮನಾಥದ ಅಖಂಡತೆಗಾಗಿ ಬೆಳಗಾವಿಯಲ್ಲಿ ಭಕ್ತಿಪೂರ್ವಕ ಅಭಿಯಾನ

ಹೊಸದಿಗಂತ ಬೆಳಗಾವಿ:

ಗುಜರಾತಿನ ಪವಿತ್ರ ಸೋಮನಾಥ ಮಂದಿರದ ಮೇಲೆ ಮೊಹಮ್ಮದ್ ಘಜನಿ ದಾಳಿ ನಡೆಸಿ 2026ರ ಜನವರಿಗೆ ಸಾವಿರ ವರ್ಷಗಳು ಸಂದ ಹಿನ್ನೆಲೆಯಲ್ಲಿ, ನಗರದ ಕೆ.ಎಲ್.ಇ ಆವರಣದ ಶಿವಾಲಯದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ ಮತ್ತು ಸಂಕಲ್ಪ ದಿನವನ್ನು ಆಚರಿಸಲಾಯಿತು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇತಿಹಾಸದ ಕರಾಳ ನೆನಪು ಹಾಗೂ ಮಂದಿರದ ಪುನರುತ್ಥಾನದ ಯಶೋಗಾಥೆಯನ್ನು ಸ್ಮರಿಸಲಾಯಿತು.

ಪೂಜೆಯ ನಂತರ ಮಾತನಾಡಿದ ಮಹಾಂತೇಶ ಕವಟಗಿಮಠ ಅವರು, “ಕ್ರಿ.ಶ 1026ರ ಜನವರಿಯಲ್ಲಿ ಘಜನಿ ಸೋಮನಾಥ ಮಂದಿರವನ್ನು ಧ್ವಂಸಗೊಳಿಸಿದ್ದ. ಈ ಘಟನೆಗೆ ಈಗ ಸಾವಿರ ವರ್ಷಗಳು ತುಂಬುತ್ತಿವೆ. ಇದು ಹಿಂದೂ ಸಮಾಜಕ್ಕೆ ಒಂದು ಕರಾಳ ದಿನವಾದರೂ, ಆಕ್ರಮಣಗಳ ನಡುವೆಯೂ ಸೋಮನಾಥ ಮಂದಿರ ಎದ್ದು ನಿಂತ ಹಾದಿ ಸ್ಫೂರ್ತಿದಾಯಕ. ಜನತೆಯ ಸಹನಶೀಲತೆ ಮತ್ತು ನಿರಂತರತೆಯನ್ನು ಜಗತ್ತಿಗೆ ಸಾರಲು ಈ ವರ್ಷವನ್ನು ‘ಸೋಮನಾಥ ಪರ್ವ’ ಎಂದು ಆಯೋಜಿಸುತ್ತಿದ್ದೇವೆ,” ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ, “2026ಕ್ಕೆ ಸೋಮನಾಥ ಮಂದಿರ ಮರುನಿರ್ಮಾಣವಾಗಿ 75 ವರ್ಷಗಳು ಪೂರ್ಣಗೊಳ್ಳುತ್ತಿವೆ. 1951ರ ಮೇ 1ರಂದು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಮಂದಿರವು ಪುನಃ ಲೋಕಾರ್ಪಣೆಗೊಂಡಿತ್ತು. ಈ ಐತಿಹಾಸಿಕ ಸಂದರ್ಭದಲ್ಲಿ ದೇಶದ ಪ್ರತಿ ಶಿವಾಲಯಗಳಲ್ಲೂ ‘ಓಂಕಾರ ಮಂತ್ರ’ ಜಪಿಸುವ ಮೂಲಕ ಜನ-ಅಭಿಯಾನದಲ್ಲಿ ಪಾಲ್ಗೊಳ್ಳಬೇಕು,” ಎಂದು ಕರೆ ನೀಡಿದರು.

ಈ ಅಭಿಯಾನದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ, ಸಂತೋಷ ದೇಶನೂರ, ಸುಭಾಷ ಸಣ್ಣವೀರಪ್ಪನವರ್, ಪ್ರವೀಣ ಮಾಳೆದವರ, ಮಂಜುನಾಥ ಅಷ್ಟಗಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Must Read