ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಪ್ರತಿಷ್ಠಿತ ದಿ ಲಲಿತ್ ಹೊಟೇಲ್ ಸಮೂಹದ ಮಾತೃ ಕಂಪನಿಯಾದ ಭಾರತ್ ಹೊಟೇಲ್ಸ್ ಲಿಮಿಟೆಡ್ ಗೆ ದೆಹಲಿ ಹೈಕೋರ್ಟ್ ಶಾಕ್ ನೀಡಿದ್ದು, ಬಾರಾಖಂಬಾ ರಸ್ತೆಯಲ್ಲಿರುವ ಹೊಟೇಲ್ ನ ಪರವಾನಗಿಯನ್ನು ರದ್ದುಗೊಳಿಸುವ ದೆಹಲಿ ಮುನ್ಸಿಪಲ್ ಕೌನ್ಸಿಲ್ ನಿರ್ಧಾರವನ್ನು ಎತ್ತಿಹಿಡಿದಿದೆ. ಜೊತೆಗೆ ಬಾಕಿ ಇರುವ ಪರವಾನಗಿ ಶುಲ್ಕದಲ್ಲಿ 1,063 ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಸೂಲಿ ಮಾಡಲು ಸೂಚನೆ ನೀಡಿದೆ.
1982ರ ರಲ್ಲಿ ಏಷ್ಯನ್ ಗೇಮ್ಸ್ ಸಿದ್ಧತೆಗಾಗಿ ಬಾರಾಖಂಬಾ ರಸ್ತೆಯಲ್ಲಿರುವ 6 ಎಕರೆ ಜಮೀನನ್ನು ಪಂಚತಾರಾ ಹೊಟೇಲ್ ನಿರ್ಮಿಸಲು ಭಾರತ್ ಹೊಟೇಲ್ಸ್‌ಗೆ 99 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿತ್ತು. ಈ ವೇಳೆ ವಾರ್ಷಿಕ ಪರವಾನಗಿ ಶುಲ್ಕ 1.45 ಕೋಟಿ ರೂಪಾಯಿಗಳಾಗಿತ್ತು. ಇದರ ಪ್ರಕಾರ ಪ್ರತಿ 33 ವರ್ಷಗಳಿಗೊಮ್ಮೆ ಈ ಶುಲ್ಕವನ್ನು ಪರಿಷ್ಕರಿಸಬೇಕಿತ್ತು. ಆದರೆ ಸಂಸ್ಥೆಯು ಪರವಾನಗಿ ನಿಯಮಗಳ ಉಲ್ಲಂಘನೆ ಮಾಡಿದ್ದು ,ಜೊತೆಗೆ ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಶುಲ್ಕ ಬರುತ್ತಿರುವುದನ್ನು ಅರಿತ ದೆಹಲಿ ಮುನ್ಸಿಪಲ್ ಕೌನ್ಸಿಲ್, 2014ರಿಂದ ಅನ್ವಯವಾಗುವಂತೆ ವಾರ್ಷಿಕ 98 ಕೋಟಿ ರೂಪಾಯಿ ದರದಲ್ಲಿ ಒಟ್ಟು 1,063.74 ಕೋಟಿ ರೂಪಾಯಿಗಳನ್ನು ಬಾಕಿ ಪಾವತಿಸುವಂತೆ ನೊಟೀಸ್ ನೀಡಿತ್ತು. ಜೊತೆಗೆ ಹೊಟೇಲ್ ನ ಪರವಾನಗಿಯನ್ನು ರದ್ದುಗೊಳಿಸಿತ್ತು. ಈ ಸಂಬಂಧ 2023ರಲ್ಲಿ ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಎನ್‌ಡಿಎಂಸಿಯ ಪರವಾನಗಿ ರದ್ದತಿಯನ್ನು ರದ್ದುಗೊಳಿಸಿ ಭಾರತ್ ಹೊಟೇಲ್ಸ್ ಪರವಾಗಿ ತೀರ್ಪು ನೀಡಿತ್ತು.
ಇದೀಗ ಇದನ್ನು ಪ್ರಶ್ನಿಸಿ ಎನ್‌ಡಿಎಂಸಿ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದೆ. ಜೊತೆಗೆ ಭೂಮಿಯ ವಹಿವಾಟಿನಿಂದ ಎನ್‌ಡಿಎಂಸಿಗೆ ಇಷ್ಟು ದೊಡ್ಡ ಮೊತ್ತದ ನಷ್ಟ ಉಂಟಾದರೆ, ಆ ಹೊರೆ ತೆರಿಗೆದಾರರ ಮೇಲೆ ಬೀಳುತ್ತದೆ ಎಂದು ಅಭಿಪ್ರಾಯಪಟ್ಟಿದೆ.



