October 14, 2026
Wednesday, October 14, 2026
spot_img

ಜಿಲೆಟಿನ್ ಕಡ್ಡಿ ಸಿಕ್ಕ ಜಾಗದಲ್ಲಿ ಟೈಮರ್ ಪತ್ತೆ: ಪ್ರಕರಣ ಎನ್​ಐಎ ತನಿಖೆಗೆ ಕೊಡ್ತೇವೆ ಎಂದ ಸಚಿವ ಜಿ. ಪರಮೇಶ್ವರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಜಿಲೆಟಿನ್ ಕಡ್ಡಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿ ಹೊಸ ಟ್ವಿಸ್ಟ್ ಎದುರಾಗಿದ್ದು, ಅದೇ ಜಾಗದಲ್ಲಿ ಟೈಮರ್ ಪತ್ತೆಯಾಗಿದೆ. ಈ ಬೆನ್ನಲ್ಲೇ ಪ್ರಕರಣವನ್ನು ಎನ್​ಐಎಗೆ ತನಿಖೆ ಮಾಡಲು ಕೊಡುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಈಗಾಗಲೇ ತನಿಖೆ ನಡೆಯುತ್ತಿದೆ. ಎನ್​ಐಎ ಕೂಡ ತನಿಖೆ ಮಾಡಲು ಮುಂದಾಗಿದೆ. ಅವರಿಗೂ ತನಿಖೆ ಮಾಡಲು ಕೊಡುತ್ತೇವೆ ಎಂದರು.

ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಅಂದಾಗ ಅಲ್ಲಿ ಭದ್ರತೆ ಹೆಚ್ಚಾಗಿ ಇರುತ್ತದೆ. ನಾವು ಹಾಗೂ ಕೇಂದ್ರದಿಂದ ಭದ್ರತೆ ಕೊಡುತ್ತೇವೆ. ಆದರೆ ಇದರ ನಡುವೆಯೂ ಪ್ರಧಾನಿಗಳ ಭೇಟಿಯ ಸಂದರ್ಭ ಇಂತಹ ಸ್ಫೋಟಕ ವಸ್ತುಗಳು ಪತ್ತೆಯಾಗಿರುವುದು ಆಘಾತಕಾರಿ ಸಂಗತಿ. ಹೀಗಾಗಿ ಈ ಪ್ರಕರಣದ ಸಂಪೂರ್ಣ ತನಿಖೆ ಅಗತ್ಯವಿದ್ದು, ಸಂಚಿನ ಬಗ್ಗೆ ಸ್ಪಷ್ಟತೆ ಪಡೆಯಲು ಎನ್​ಐಎ ತನಿಖೆಗೆ ಒಪ್ಪಿಸುತ್ತಿರುವುದಾಗಿ ತಿಳಿಸಿದರು.

ಇದೇ ವೇಳೆ ಬಾಂಬ್ ಬೆದರಿಕೆ ಕರೆಗಳ ಕುರಿತು ಮಾಹಿತಿ ನೀಡಿದ ಸಚಿವರು, ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆತನ ಹಿನ್ನೆಲೆ ಮತ್ತು ಈ ಜಿಲೆಟಿನ್ ಕಡ್ಡಿ ಪ್ರಕರಣಕ್ಕೂ ಆತನಿಗೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

Must Read