ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆ ಬದಿಯಲ್ಲಿ ನಿಂತು ಮಾತನಾಡುತ್ತಿದ್ದ ನಾಲ್ವರು ಯುವಕರಿಗೆ ಟಿಪ್ಪರ್ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಮನಗರ ಸಂಚಾರ ಠಾಣೆ ವ್ಯಾಪ್ತಿಯ ಮಾಯಗಾನಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಅಪಘಾತ ಬಳಿಕ ಚಾಲಕ ಟಿಪ್ಪರ್ ಅನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಮೃತರನ್ನು ಗಾರೆ ಕೆಲಸಗಾರರಾದ ಗುರುಮೂರ್ತಿ (39), ಶೇಕ್ ಅಫೀಸ್ (45), ವೆಂಕಟೇಶ್ (50) ಎಂದು ಗುರುತಿಸಲಾಗಿದೆ. ಗಾಯಾಳು ಹನುಮಂತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪರಾರಿಯಾಗಿರುವ ಚಾಲಕನನ್ನು ಉಮೇಶ್ ಎಂದು ಗುರ್ತಿಸಲಾಗಿದೆ.
ಬೆಳಗ್ಗೆ 8.15ರ ಸುಮಾರಿಗೆ ಬಿಡದಿ ಕಡೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಗುರುಮೂರ್ತಿ ಮತ್ತು ವೆಂಕಟೇಶಪ್ಪ ತಮ್ಮ ಇಬ್ಬರು ಸ್ನೇಹಿತರು ರಸ್ತೆಬದಿಯಲ್ಲಿ ನಿಂತಿದ್ದನ್ನು ನೋಡಿ ಮಾಯಗಾನಹಳ್ಳಿ ಬಳಿ ಬೈಕ್ ನಿಲ್ಲಿಸಿದ್ದಾರೆ. ಇದೇ ವೇಳೆ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿಕೊಂಡ ನಂತರ ಟಿಪ್ಪರ್ ಚಾಲಕ ರಸ್ತೆಯಲ್ಲಿ ನಿಂತಿದ್ದ ನಾಲ್ವರಿಗೆ ಡಿಕ್ಕಿ ಹೊಡೆಸಿದ್ದಾನೆಂದು ತಿಳಿದುಬಂದಿದೆ.
ಘಟನೆ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಸಂಚಾರ ಪೊಲೀಸರು ಟಿಪ್ಪರ್ ವಶಪಡಿಸಿಕೊಂಡು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ತನಿಖೆ ಮುಂದುವರೆದಿದೆ.