ಚಂದ್ರಶೇಖರ ಎಸ್. ಚಿನಕೇಕರ
ಚಿಕ್ಕೋಡಿ: ಗ್ರಾಮದ ಪ್ರತಿ ಮನೆಯಲ್ಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ, ಸಲ್ಲಿಸುತ್ತಿರುವ ಯೋಧರು ಇದ್ದಾರೆಂದರೆ ಆ ಗ್ರಾಮದ ಹಿರಿಮೆ ಹೇಗಿರಬೇಡ? ಅಂತಹ ಗ್ರಾಮವೇ ಚಿಕ್ಕೋಡಿ ತಾಲೂಕಿನಲ್ಲಿ ಮಲ್ಲಿಕವಾಡ. ಈ ಗ್ರಾಮದ ತುಂಬೆಲ್ಲ ಯೋಧರೇ ಯೋಧರು! 400ಕ್ಕಿಂತ ಹೆಚ್ಚು ಮನೆಗಳು ಇರುವ ಈ ಪುಟ್ಟ ಗ್ರಾಮದಲ್ಲಿ ಅತೀ ಹೆಚ್ಚು ಸೈನಿಕರು ಇರುವ ಕಾರಣದಿಂದ ಬಹುತೇಕರು ಮಲಿಕವಾಡವನ್ನು ಸೈನಿಕ ಮಲಿಕವಾಡ ಎಂದೇ ಕರೆಯುತ್ತಾರೆ. ಈ ಹೆಸರಿನಿಂದಲೇ ಗ್ರಾಮ ಸುಪ್ರಸಿದ್ದಿ ಪಡೆದಿದೆ.
ಇದೀಗ ಸೈನಿಕ ಮಲಿಕವಾಡ ಗ್ರಾಮದಲ್ಲಿ 150ಕ್ಕೂ ಹೆಚ್ಚು ಸೈನಿಕರು ಆರ್ಮಿ, ಏರ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಇದುವರೆಗೆ ಸೈನಿಕ ಮಲಿಕವಾಡ ಗ್ರಾಮದ ಸಹಸ್ರಾರು ಜನರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿಯಾಗಿರುವ ಬಹುತೇಕರು ಯುವಕರಿಗೆ ತರಬೇತಿಯನ್ನು ನೀಡಿ ಸೈನ್ಯಕ್ಕೆ ಅಣಿಗೊಳಿಸುವ ಸೇವೆಯನ್ನು ಉಚಿತವಾಗಿ ಮಾಡುತ್ತಿದ್ದಾರೆ. ಸದ್ದಿಲ್ಲದೇ ಭಾರತಾಂಬೆಯ ಸೇವೆಯನ್ನು ನಿವೃತ್ತಿಯಾಗಿದ್ದರೂ ಇಲ್ಲಿ ಮಾಡುತ್ತಿರುವುದು ಮತ್ತೊಂದು ವಿಶೇಷ.
ಸೈನಿಕ ಮಲಿಕವಾಡ ಗ್ರಾಮದಲ್ಲಿ ನೂರಾರು ನಿವೃತ್ತ ಸೈನಿಕರು ಇದ್ದುದ್ದರಿಂದ ನಿವೃತ್ತ ಯೋಧರ ಸಂಘಟನೆಯೊಂದನ್ನು ಮಾಡಿಕೊಂಡು ಯೋಧರು ಆಕಸ್ಮಿಕವಾಗಿ ಮರಣ ಹೊಂದಿದರೂ ಕೂಡ ಅವರ ಅಂತ್ಯಕ್ರಿಯೆಯನ್ನು ಸೈನ್ಯದ ವಿಧಿ ವಿಧಾನಗಳಂತೆಯೇ ಮಾಡಲಾಗುತ್ತದೆ. ವೀರ ಮರಣವನ್ನಪ್ಪಿದ ಯೋಧನ ಕುಟುಂಬಕ್ಕೆ ನಿವೃತ್ತ ಯೋಧರ ಸಂಘಟನೆಯು ಆರ್ಥಿಕ ಸಹಾಯವನ್ನೂ ಕೂಡ ಮಾಡುತ್ತದೆ. ಕೆಲವರಂತೂ ಬೆಳಿಗ್ಗೆ ಹಾಗೂ ಸಂಜೆ ಸೇರಿದಂತೆ ನೂರಾರು ಯುವಕರಿಗೆ ಸೈನ್ಯ ಸೇರುವ ಕುರಿತು ತರಬೇತಿ ನೀಡಲಾಗುತ್ತಿದೆ. ಹೀಗಾಗಿ ಇಲ್ಲಿ ಪ್ರತಿ ವರ್ಷ ಸುಮಾರು 10 ರಿಂದ 20 ಜನ ಯುವಕರು ಭಾರತೀಯ ಸೇನೆಯಲ್ಲಿ ಸೇವೆಗೆ ಸೇರ್ಪಡೆಯಾಗುತ್ತಾರೆ.
ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಸ್ಥಳೀಯ ಯೋಧರು, ನಿವೃತ್ತ ಯೋಧರು 15 ಲಕ್ಷ ರೂ.ಗೂ ಹೆಚ್ಚು ದೇಣಿಗೆ ಸಂಗ್ರಹಿಸಿ ಬೃಹತ್ ದ್ವಾರವೊಂದನ್ನು ಗ್ರಾಮದ ಪ್ರಮುಖ ರಸ್ತೆಯಲ್ಲಿ ನಿರ್ಮಾಣ ಮಾಡಿದ್ದಾರೆ. ಇದರ ಮೇಲೆ ದೇಶಾಭಿಮಾನದ ಬರಹಗಳನ್ನು ಬರೆಯಲಾಗಿದ್ದು, ಸೈನಿಕರ ಚಿತ್ರಗಳನ್ನು ಬರೆಯಲಾಗಿದೆ. ಹೀಗೆ ಇನ್ನೂ ಹಲವು ಕೆಲಸಗಳನ್ನು ಸರ್ಕಾರದ ಅನುದಾನ ಪಡೆಯದೇ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ನಿವೃತ್ತ ಹಾನರರಿ ಕ್ಯಾಪ್ಟನ್ ಗೋಪಾಲ ಟೋಂಬಡೆ ಹೇಳುತ್ತಾರೆ.
ಕೋಗನೂರ ವೀರಯ್ಯ ಹಿರೇಮಠ, ತಿರಕಪ್ಪ ಮಡಿವಾಳರ, ಗೋಣೆಪ್ಪ ಕಮತ, ಯಲ್ಲಮ್ಮ ಕಮತ, ಗುಡ್ಡಪ್ಪ ಕರಿಯಲ್ಲಪ್ಪ ಡೇಲಕ್ಕನವರ, ನಿಂಗಪ್ಪ ಗುಡ್ಡಪ್ಪ ಕುರಗುಂದ, ಈರಪ್ಪ ಅಂಗಡಿ, ನೀಲಪ್ಪ ಕರಿಯಲ್ಲಪ್ಪ ಡಲಕ್ಕನವರ, ವೀರಭದ್ರ ಗೌಡ ಪಾಲಾಕ್ಷಗೌಡ ಪಾಟೀಲ, ಸಿದ್ದಪ್ಪ ಬೆನ್ನೂರ, ಪರಡ್ಡಿ ರಡ್ಡರ, ಪಕೀರಪ್ಪ ಕುರಗುಂದ, ಭಗವಂತಪ್ಪ ಬೂದನೂರು, ಶಿವಯ್ಯ ಹಿರೇಮಠ, ವಾಸುರಡ್ಡಿ ರಡೇ, ರಾಮಣ್ಣ ಕುರಗುಂದ, ಚನ್ನಪ್ಪ ಅಗಸರ ಈ ಗ್ರಾಮದ ಹುತಾತ್ಮ ಯೋಧರಾಗಿದ್ದಾರೆ.