ಹೊಸದಿಗಂತ ವರದಿ ವಿಜಯಪುರ:
ಹಲ್ಲಿ ಬಿದ್ದ ಆಹಾರ ಸೇವಿಸಿ 30 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸೋಮವಾರ ಮಧ್ಯಾಹ್ನ ಶಾಲೆಯಿಂದ ಬಂದ ಮೇಲೆ ವಿದ್ಯಾರ್ಥಿನಿಯರು ಎಂದಿನಂತೆ ಊಟ ಮಾಡಿದ್ದಾರೆ. ಸಂಜೆ ಹಲ್ಲಿ ಬಿದ್ದ ವಿಷಯ ಹರಡಿ ಹಲವರು ಆತಂಕಕ್ಕೊಳಗಾಗಿದ್ದರು.
ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವಸತಿ ನಿಲಯಕ್ಕೆ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಲಾಗಿದೆ.
ಕೆಲವರನ್ನು ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿ ಡಾ. ಅನೀಲಕುಮಾರ ಶೇಗುಣಸಿ ತಿಳಿಸಿದ್ದಾರೆ.