ಹೊಸದಿಗಂತ ವರದಿ, ಬೀದರ್:
ಇಲ್ಲಿಯ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್ ಟಿಒ) ಇನ್ಸ್‌ಪೆಕ್ಟರ್ ಮಂಜುನಾಥ ಕೊರವೆ ಅವರು ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಆವಾಜ್ ಹಾಕಿದ ಪ್ರಸಂಗ ನಡೆದಿದೆ.
ಬೀದರ್ ಹೊರವಲಯದ ಲಾಲಬಾಗ್ ಹತ್ತಿರ ಆರ್ ಟಿಒ ಇನ್ಸ್‌ಪೆಕ್ಟರ್ ಮಂಜುನಾಥ ವಾಹನಗಳನ್ನು ಹಿಡಿದು ತಪಾಸಣೆ ಮಾಡುತ್ತಿದ್ದರು. ಇದೇ ಮಾರ್ಗವಾಗಿ ಶಾಸಕ ಡಾ. ಬೆಲ್ದಾಳೆ ಹೋಗುತ್ತಿದ್ದಾಗ ಕೆಲವರು ಇನ್ಸ್‌ಪೆಕ್ಟರ್ ಕಿರಿಕಿರಿ ಗಮನಕ್ಕೆ ತಂದಿದ್ದಾರೆ. ಇದರ ಬಗ್ಗೆ ವಿಚಾರಿಸಲು ಬಂದ ಶಾಸಕರಿಗೆ ಇನ್ಸ್‌ಪೆಕ್ಟರ್ ಚಿಟಿಕೆ ಹೊಡೆದು ಆವಾಜ್ ಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ.
ಜನರ ದೂರು, ಜನರ ಹಿತದಿಂದ ಶಾಸಕರು ಚರ್ಚೆ ಶುರು ಮಾಡಿದ್ದೇ ತಡ, ಆವೇಶಕ್ಕೆ ಒಳಗಾದ ಇನ್ಸ್‌ಪೆಕ್ಟರ್ ನನಗೆ ಪ್ರಶ್ನಿಸುವರು ನೀವ್ಯಾರು ಎಂಬಂತೆ ಮೊಂಡುತನ ತೋರಿಸಿದ್ದಾರೆ. ನೀವು ಎಲ್ಲಿನ ಶಾಸಕರು? ಎಂದು ಪ್ರಶ್ನಿಸಿದ್ದಾರೆ.
ನಂತರ ನೀವೆಲ್ಲ ಹೇಗೆ ಎಂಬುದು ನನಗೆ ಚೆನ್ನಾಗಿ ಗೊತ್ತು. ನಿಮಗೆ ರಾಜಕೀಯ ಮಾತ್ರ ಗೊತ್ತು. ಆದರೆ ನನಗೆ ಎಲ್ಲ ಫೀಲ್ಡ್ ಗಳು ಗೊತ್ತು ಎಂದು ಇನ್ಸ್‌ಪೆಕ್ಟರ್ ಹೂಂಕರಿಸಿದ್ದಾರೆ. ಈ ರೀತಿ ಶಾಸಕರ ಜೊತೆಗೆ ಮಾತನಾಡುವುದು ಸರಿಯಲ್ಲ ಎಂದು ಬೆಲ್ದಾಳೆ ಎಷ್ಟೇ ಹೇಳಿದರೂ ಅಧಿಕಾರದ ‘ಅಮಲು’ ನೆತ್ತಿಗೇರಿದಂತೆ ನಾಲಿಗೆ ಹರಿಬಿಟ್ಟಿದ್ದಾರೆ.
ಇನ್ಸ್‌ಪೆಕ್ಟರ್ ಮಂಜುನಾಥ ಅಸಭ್ಯ ವರ್ತನೆ ಬಗ್ಗೆ ಶಾಸಕರು ಕೂಡಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮಾತನಾಡಿದ ಬೆನ್ನಲ್ಲೇ ಸಾರಿಗೆ ಇಲಾಖೆ ಆಯುಕ್ತರು ಇನ್ಸ್‌ಪೆಕ್ಟರ್ ಮಂಜುನಾಥ ಅವರಿಗೆ ರಾಯಚೂರು ಆರ್ ಟಿಒ ಕಚೇರಿ ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ವರ್ಗ ಮಾಡಿ ಆದೇಶಿಸಿದ್ದಾರೆ.
ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಡಾ.ಬೆಲ್ದಾಳೆ, ಸಾರ್ವಜನಿಕರಿಂದ ದೂರು ಬಂದಾಗ ಜನಹಿತ ದೃಷ್ಟಿಯಿಂದ ಅಧಿಕಾರಿಗೆ ಪ್ರಶ್ನಿಸಿದರೆ ಈ ಪರಿ ಭಂಡತನ ಪ್ರದರ್ಶಿಸಿದ್ದು ಅಚ್ಚರಿ ಮೂಡಿಸಿದೆ ಎಂದಿದ್ದಾರೆ.