March 10, 2026
Tuesday, March 10, 2026
spot_img

ಅಪ್ಪನಿಗಾಗಿ ಒಂದು ಗೆಲುವು: ವೈಯಕ್ತಿಕ ದುಃಖ ಬದಿಗಿಟ್ಟು ಮೈದಾನಕ್ಕಿಳಿಯಲಿದ್ದಾರೆ ರಿಂಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಭರವಸೆಯ ಯುವ ಆಟಗಾರ ರಿಂಕು ಸಿಂಗ್ ಅವರು ವೈಯಕ್ತಿಕ ಬದುಕಿನ ದೊಡ್ಡ ಆಘಾತದ ನಡುವೆಯೂ ರಾಷ್ಟ್ರದ ಹಿತಾಸಕ್ತಿಗಾಗಿ ಮೈದಾನಕ್ಕೆ ಮರಳಿದ್ದಾರೆ. ಫೆಬ್ರವರಿ 27 ರಂದು ತಂದೆ ಖಾನ್‌ಚಂದ್ ಸಿಂಗ್ ಅವರನ್ನು ಕಳೆದುಕೊಂಡಿದ್ದ ರಿಂಕು, ಕೇವಲ 24 ಗಂಟೆಗಳಲ್ಲಿ ಅಲಿಗಢದಲ್ಲಿ ಅಂತ್ಯಕ್ರಿಯೆ ಮುಗಿಸಿ ಇಂದು ಕೋಲ್ಕತ್ತಾದಲ್ಲಿ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.

ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಂಕು ತಂದೆ ಶುಕ್ರವಾರ ಮುಂಜಾನೆ ನಿಧನರಾಗಿದ್ದರು. ತಕ್ಷಣವೇ ಮನೆಗೆ ತೆರಳಿದ್ದ ರಿಂಕು, ಮಗನಾಗಿ ಮಾಡಬೇಕಾದ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ್ದಾರೆ. ಆದರೆ, ತಂಡಕ್ಕೆ ತಮ್ಮ ಅಗತ್ಯವಿದೆ ಎಂಬುದನ್ನು ಅರಿತ ಅವರು, ನೋವನ್ನು ಬದಿಗೊತ್ತಿ ಇಂದು ಸಂಜೆ ಈಡನ್ ಗಾರ್ಡನ್ಸ್‌ನಲ್ಲಿ ಅಭ್ಯಾಸ ಆರಂಭಿಸುವ ಸಾಧ್ಯತೆಯಿದೆ.

ಮಾರ್ಚ್ 1 ರಂದು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವು ಭಾರತದ ಪಾಲಿಗೆ ‘ಸೆಮಿಫೈನಲ್ ಟಿಕೆಟ್’ ಇದ್ದಂತೆ. ಈ ನಿರ್ಣಾಯಕ ಪಂದ್ಯದಲ್ಲಿ ಗೆದ್ದವರು ಮಾತ್ರ ಮುಂದಿನ ಹಂತಕ್ಕೆ ಏರಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ರಿಂಕು ಸಿಂಗ್ ಅವರಂತಹ ಫಿನಿಶರ್ ಮರಳಿರುವುದು ಟೀಮ್ ಇಂಡಿಯಾಗೆ ಆನೆಬಲ ಬಂದಂತಾಗಿದೆ.

ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ರಿಂಕು ಸಿಂಗ್ ಅವರಿಗೆ ಈಡನ್ ಗಾರ್ಡನ್ಸ್ ತವರು ಮೈದಾನವಿದ್ದಂತೆ. ಇಲ್ಲಿನ ಪಿಚ್ ಮತ್ತು ವಾತಾವರಣದ ಬಗ್ಗೆ ಅವರಿಗಿರುವ ಅಪಾರ ಅನುಭವ ಭಾರತ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

“ತಂದೆಯ ಅಗಲಿಕೆಯ ದುಃಖದಲ್ಲೂ ತಂಡಕ್ಕಾಗಿ ಆಡಲು ಬಂದಿರುವ ರಿಂಕು ಅವರ ನಿರ್ಧಾರ ಸ್ಫೂರ್ತಿದಾಯಕ,” ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಶ್ಲಾಘಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !