ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೌರ ಕಾರ್ಮಿಕ ಸಿಬ್ಬಂದಿ ಜೊತೆ ಮಹಿಳೆಯೊಬ್ಬರು ಒರಟಾಗಿ ನಡೆದುಕೊಂಡು, ಅವಾಚ್ಯ ಶಬ್ದಗಳಲ್ಲಿ ಮಾತನಾಡಿದ್ದಕ್ಕೆ ಕಾರ್ಮಿಕರು ಮನೆ ಮುಂದೆ ಲೋಡ್ ಸುರಿದು ರಿವೇಂಜ್ ತೀರಿಸಿಕೊಂಡ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.
ವೀವರ್ಸ್ ಕಾಲೋನಿಯಲ್ಲಿ ಪೌರ ಕಾರ್ಮಿಕರಿಗೆ ಮಹಿಳೆಯೊಬ್ಬರು ತಮ್ಮ ಮನೆಯ ಮುಂದಿರುವ ಕಸವನ್ನು ಮೊದಲು ಕ್ಲೀನ್ ಮಾಡೋದಕ್ಕೆ ಹೇಳಿದ್ದಾರೆ. ಆ ಸಮಯದಲ್ಲಿ ಸಿಬ್ಬಂದಿ ಅಶೋಕ್ ಕುಮಾರ್ ಅವರು ರಾಜಕಾಲುವೆ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ರಾಜಕಾಲುವೆ ಬಿಟ್ಟು ನಮ್ಮ ಮನೆಯ ಮುಂದಿನ ಕಸ ತೆಗಿ ಫಸ್ಟ್ ಎಂದು ಪುಟ್ಟಮ್ಮ ಎಂಬ ನಿವಾಸಿ ಖ್ಯಾತೆ ತೆಗೆದಿದ್ದಾರೆ.
ಮಾತಿನ ಚಕಮಕಿ ಹೆಚ್ಚಾಗಿ ಪುಟ್ಟಮ್ಮ ಪೌರಕಾರ್ಮಿಕರಿಗೆ ಕೆಟ್ಟ ಪದಗಳನ್ನು ಬಳಸಿದ್ದಾರೆ. ಕೆಟ್ಟ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ಅಶೋಕ್ ಇತರ ಕಾರ್ಮಿಕರಿಗೆ ವಿಷಯ ತಿಳಿಸಿದ್ದಾರೆ. ತದನಂತರ ಎಲ್ಲರೂ ಸೇರಿ ಒಂದು ಲೋಡ್ ಕಸವನ್ನು ಪುಟ್ಟಮ್ಮ ಮನೆಯ ಮುಂದೆ ಸುರಿದಿದ್ದಾರೆ.
ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಸ ತೆಗೆಯುವವರು ಎಂದ ಮಾತ್ರಕ್ಕೆ ಗೌರವಯುತವಾಗಿ ನಡೆಸಿಕೊಳ್ಳದೇ ಇರುವುದು ತಪ್ಪು ಎಂದು ಹಲವರು ಹೇಳಿದ್ದರೆ, ಕಂಪ್ಲೆಂಟ್ ಮಾಡುವ ಬದಲು ಕಸ ತಂದು ಮನೆ ಮುಂದೆ ಸುರಿದಿದ್ದು ತಪ್ಪು ಎಂದು ಕೆಲವರು ಹೇಳಿದ್ದಾರೆ.



