ಹೊಸದಿಗಂತ ವರದಿ,ಕುಶಾಲನಗರ:
ಸ್ನಾನಕ್ಕೆ ತೆರಳಿದ ಯುವಕ ನೀರಿನಲ್ಲಿ ಮುಳುಗಿ ಸಾವಿಗೀಡಾದ ಘಟನೆ ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿ ನಡೆದಿದೆ.
ಮೂಲತಃ ಸೋಮವಾರಪೇಟೆ ಸಮೀಪದ ತೋಳೂರು ಶೆಟ್ಟಳ್ಳಿಯ ಯುವಕ ಧರಣ್ (22) ಮೃತ ಯುವಕ.
ಕುಶಾಲನಗರದ ಬೈಚನಹಳ್ಳಿಯ ತಾವರೆಕೆರೆ ಬಳಿಯ ಬಾರ್ ಒಂದರಲ್ಲಿ ಕಳೆದ ಮೂರು ವರ್ಷ ಕೆಲಸ ನಿರ್ವಹಿಸುತ್ತಿದ್ದ ಈ ಯುವಕ ಪ್ರಸ್ತುತ ಆಲೂರು ಸಿದ್ದಾಪುರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಅಲ್ಲಿಂದ ಒಬ್ಬನೇ ಕುಶಾಲನಗರಕ್ಕೆ ಬಂದು ಕಾವೇರಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದಾನೆ.
ನದಿಗೆ ಇಳಿಯುವ ಮುನ್ನ ತನ್ನ ಸ್ನೇಹಿತನಿಗೆ ಕರೆ ಮಾಡಿ ತಿಳಿಸಿದ್ದು ಆತ ಸ್ಥಳಕ್ಕೆ ಬರುವ ಸಂದರ್ಭ ಈತ ನೀರಿನಲ್ಲಿ ಮುಳುಗುತ್ತಿರುವುದು ಕಂಡುಬಂದಿದೆ.
ಅಗ್ನಿಶಾಮಕ ದಳದವರು ಮೃತದೇಹ ಹೊರತೆಗೆದಿದ್ದು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.