ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿದಳು ಎಂಬ ಕಾರಣಕ್ಕೆ 16 ವರ್ಷದ ಬಾಲಕಿಯೊಬ್ಬಳಿಗೆ 14 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿನಡೆದಿದೆ.
22 ವರ್ಷದ ಕೇಶವನ್ 11ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಈ ಹಿಂದೆ 2021ರಲ್ಲಿ ಅದೇ ಹುಡುಗಿಯನ್ನು ಅಪಹರಿಸಿದ್ದಕ್ಕಾಗಿ ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ, 2012 (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿತ್ತು. ಆತ ಇತ್ತೀಚೆಗಷ್ಟೆ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ.
ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನು ತಡೆದ ಕೇಶವನ್ ಪ್ರೀತಿಸುವಂತೆ ಪೀಡಿಸಿದ್ದಾನೆ. ಬಾಲಕಿ ನಿರಾಕರಿಸಿದ್ದಕ್ಕೆ ಕೋಪದಿಂದ 14 ಬಾರಿ ಚಾಕುವಿನಿಂದ ಇರಿದು ಚಾಕುವನ್ನು ಅಲ್ಲೇ ಎಸೆದು ಪರಾರಿಯಾಗಿದ್ದಾನೆ. ನೆಲಕ್ಕೆ ಬಿದ್ದು ಒದ್ದಾಡುತ್ತಿದ್ದ ಬಾಲಕಿಯನ್ನು ಕಂಡ ಸ್ಥಳೀಯರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆಕೆ ಚಿಂತಾಜನಕ ಸ್ಥಿತಿಯಲ್ಲಿದ್ಧಾಳೆ ಎಂದು ವರದಿಯಾಗಿದೆ.
ಆರೋಪಿಯನ್ನು ತಿರುಚ್ಚಿಯ ಪೋತಮೆಟ್ಟುಪಟ್ಟಿ ನಿವಾಸಿ ಕೇಶವನ್ ಎಂದು ಗುರುತಿಸಿರುವ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.