ವೋಟ್ ಮಾಡಲು ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಲಂಡನ್‌ನಿಂದ ಬಂದ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭಾ ಚುನಾವಣೆಗಾಗಿ ಒಂದೂವರೆ ಲಕ್ಷ ರೂ. ಖರ್ಚು ಮಾಡಿಕೊಂಡು ಲಂಡನ್‌ನಿಂದ ಬಂದು ಯುವತಿ ಮತದಾನ ಮಾಡಿ ಗಮನ ಸೆಳೆದಿದ್ದಾರೆ.

ದೇಶದಲ್ಲಿದ್ದು ಜನರು ಮಾತ್ರ ಅದೆಷ್ಟು ನಿರ್ಲಕ್ಷ್ಯವಹಿಸಿದ್ದಾರೆಂದರೆ ಅವರು ತಮ್ಮೂರಲ್ಲೇ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುತ್ತಿಲ್ಲ. ಕೆಲವರು ಬಿಸಿಲು ಝಳಕ್ಕೆ ಹೆದರಿ ಮನೆಯಲ್ಲಿ ಉಳಿದರೆ ಇನ್ನು ಕೆಲವರು ಮತದಾನದ ದಿನದಂದು ರಜೆ ಸಿಕ್ಕಿದ್ದಕ್ಕೆ ಟ್ರಿಪ್ ಹೋಗುತ್ತಿದ್ದಾರೆ. ಇವರ ನಡುವೆ ಜನರ ನಡುವೆ ಇಲ್ಲೊಬ್ಬಳು ಮತದಾನ ಮಾಡುವ ಸಲುವಾಗಿಯೇ ಲಂಡನ್‌ನಿಂದ ಮಂಡ್ಯಗೆ ಬಂದು ಮತ ಚಲಾಯಿಸುವ ಮೂಲಕ ಮತದಾನ ಮಹತ್ವ ತಿಳಿಸಿದ್ದಾಳೆ.

ಮಂಡ್ಯ ಜಿಲ್ಲೆಯ ಕಾಳೇನಹಳ್ಳಿ ಗ್ರಾಮದ ಸೋನಿಕ ಎಂಬ ಯುವತಿ ಮತದಾನ ಮಾಡುವುದಕ್ಕಾಗಿಯೇ ಲಂಡನ್‌ನಿಂದ ಮಂಡ್ಯಕ್ಕೆ ಬಂದಿದ್ದಾಳೆ. ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಸೋನಿಕಾ ಲಂಡನ್‌ನಲ್ಲಿ ನೆಲೆಸಿದ್ದಾರೆ. ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆ ಮತದಾನ ಮಾಡುವ ಸಲುವಾಗಿ ಬರೋಬ್ಬರಿ ಒಂದೂವರೆ ಲಕ್ಷ ಖರ್ಚು ಮಾಡಿಕೊಂಡು ಗ್ರಾಮಕ್ಕೆ ಬಂದು ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ನನ್ನ ಸಹೋದರ ಚುನಾವಣೆ ಬಗ್ಗೆ ತಿಳಿಸಿದರು. ಮತದಾನ ಮಾಡುವುದು ತುಂಬಾ ಮುಖ್ಯ ಎಂದು ನನಗೆ ಅರಿವು ಮೂಡಿಸಿದರು. ಹೀಗಾಗಿ ನಾನು ಲಂಡನ್‌ನಿಂದ ಬಂದು ವೋಟ್‌ ಹಾಕಿದ್ದೇನೆ ಎಂದು ತಿಳಿಸಿದರು.

ಎಲ್ಲರೂ ಬಂದು ತಪ್ಪದೇ ಮತದಾನ ಮಾಡಿ. ಇದು ತುಂಬಾ ಮುಖ್ಯ. ಅಭಿವೃದ್ಧಿಗಾಗಿ ಮತದಾನ ಮಾಡಿ. ರಾಜ್ಯದಲ್ಲಿ ಬರಗಾಲ ಕೂಡ ಇದೆ. ಇಂತಹ ಸಮಸ್ಯೆಗಳ ನಿವಾರಣೆಗೆ ಒಳ್ಳೆಯ ವ್ಯಕ್ತಿಯ ಆಯ್ಕೆ ಮುಖ್ಯ. ಹೀಗಾಗಿ ಎಲ್ಲರೂ ಬಂದು ಮತ ಹಾಕಿ ಎಂದು ಸಲಹೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!