ಚಾಮರಾಜನಗರದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು: ಮತಗಟ್ಟೆ ಧ್ವಂಸ, ಅಧಿಕಾರಿಗಳ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಾಮರಾಜನಗರ ಜಿಲ್ಲೆಯಲ್ಲಿ ಜನರನ್ನು ಚದುರಿಸಲು ಪೊಲೀಸರು ನಡೆಸಿದಲಾಠಿ ಚಾರ್ಜ್ ನಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಪೊಲೀಸರ ಮೇಲೆ ಪ್ರತಿದಾಳಿ ನಡೆಸಿ, ಮತಗಟ್ಟೆಯಲ್ಲಿನ ಮೇಜು, ಕುರ್ಚಿ, ಇವಿಎಂ ಮಿಷಿನ್ ಧ್ವಂಸಗೊಳಿಸಿರುವಂತ ಘಟನೆ ನಡೆದಿದೆ

ಇಲ್ಲಿನ ಮಲೆ ಮಹದೇಶ್ವರ ಬೆಟ್ಟದ ಕುಗ್ರಾಮ ಇಂಡಿಗನತ್ತದಲ್ಲಿ ಮೂಲಸೌಕರ್ಯಗಳನ್ನು ನೀಡಬೇಕೆಂದು ಮತದಾನ ಬಹಿಷ್ಕಾರ ಹಾಕಿದ್ದ ಜನರಲ್ಲಿ ಮತದಾನ ಮಾಡಲೇಬೇಕೆಂದು ಒತ್ತಾಯ ಮಾಡಿದ್ದಕ್ಕೆ ಮತಗಟ್ಟೆ ಧ್ವಂಸಗೊಳಿಸಿ, ಅಧಿಕಾರಿಗಳ ಮೇಲೆ ಹಲ್ಲೆ ಮಾಡಲಾಗಿದೆ.

ಗ್ರಾಮಸ್ಥರಿಂದ ತಹಸೀಲ್ದಾರ್, ಇನ್ಸ್‍ಪೆಕ್ಟರ್ ಹಾಗೂ ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು, ಮತ ಯಂತ್ರಕ್ಕೆ ಬೆಂಕಿ ಇಡಲಾಗಿದೆ.

ಗ್ರಾಮಕ್ಕೆ ರಸ್ತೆ ನಿರ್ಮಾಣ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಅಗತ್ಯ ಮೂಲ ಸೌಕರ್ಯವನ್ನು ಒದಗಿಸದಿದ್ದಲ್ಲಿ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಆಯಾ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಗ್ರಾಮಸ್ಥರನ್ನು ಮನವೊಲಿಕೆಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಜೊತೆಗೆ ಚುನಾವಣಾಧಿಕಾರಿಗಳು, ಗ್ರಾಮಸ್ಥರ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು. ಈ ವೇಳೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸೋದಕ್ಕೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.

ಪೊಲೀಸರ ಲಾಠಿ ಚಾರ್ಜ್ ನಿಂದ ರೊಚ್ಚಿಗೆದ್ದಂತ ಗ್ರಾಮಸ್ಥರು ಇಂಡಿಗನತ್ತ ಮತಗಟ್ಟೆಯ ಮೇಲೆ ದಾಳಿ ನಡೆಸಿದರು. ಮತಕೇಂದ್ರದಲ್ಲಿನ ಮೇಜು, ಕುರ್ಚಿ, ಇವಿಎಂ ಯಂತ್ರವನ್ನು ಪುಡಿಪುಡಿ ಮಾಡಿದ್ದಾರೆ. ಈಗ ಸ್ಥಳದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಬಿಗಿ ಪೊಲೀಸ್ ಬಂಧೋಬಸ್ತ್ ಕೈಗೊಳ್ಳಲಾಗಿದೆ.

ಇನ್ನೂ ಮತಗಟ್ಟೆಯ ಮೇಲೆ ಗ್ರಾಮಸ್ಥರ ದಾಳಿಯಿಂದಾಗಿ ಮತಗಟ್ಟೆಯ ಕೆಲ ಅಧಿಕಾರಿಗಳು ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹನೂರು ತಹಶೀಲ್ದಾರ್ ಆಗಮಿಸಿ, ಪರಿಸ್ಥಿತಿ ನಿಯಂತ್ರಿಸೋಕ್ಕೆ ಕ್ರಮವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!