ಅರ್ತಿಯ ಅಮಲಾಭರಣ- ಗಾಯತ್ರೀ ಎಸ್. ಉಡುಪರಿಗೆ ಅಕ್ಷರ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

  • ಹರೀಶ್ ಕೊಡೆತ್ತೂರು

ನಾಡಿನ ಹಿರಿಯ ಸಾಹಿತಿ, ಬಹುಮುಖ ಪ್ರತಿಭೆ, ಸಮಾಜಸೇವಕಿ, ಸಂಗೀತ ಶಿಕ್ಷಕಿ, ಸಾವಿರಾರು ವಿದ್ಯಾರ್ಥಿಗಳ ಬಾಳು ಬೆಳಗಿದ ಶ್ರೀಮತಿ ಗಾಯತ್ರಿ ಎಸ್. ಉಡುಪರು ಇಂದು ನಮ್ಮೊಡನಿಲ್ಲ . ಅವರು ಮಂಗಳವಾರ (೨೦೨೨ ನ.೨೨)ರಂದು ಇಹಲೋಕ ತ್ಯಜಿಸಿದ್ದಾರೆ. ಮಹಾನ್ ಸಾಧಕಿಯ ಬದುಕು ಎಲ್ಲರಿಗೂ ಪ್ರೇರಣಾದಾಯಿ. ಅವರ ಬದುಕು ನಮಗೆ ಆದರ್ಶ, ಆದರಣೀಯ… ‘ಅಳಿಯುವುದು ಕಾಯ… ಉಳಿಯುವುದು ನೆನಪು…’ ಅವರಿಗೆ ಈ ಭಾವಪೂರ್ಣ ಅಕ್ಷರನಮನ.

ಶ್ರೀಮತಿ ಗಾಯತ್ರಿ ಎಸ್. ಉಡುಪರು ಬಿ. ಶಿವರಾಮ ವಾರಂಬಳ್ಳಿ ಹಾಗೂ ಕಮಲಾಕ್ಷಿ ವಾರಂಬಳ್ಳಿ ದಂಪತಿಯ ಸತ್ಪುತ್ರಿಯಾಗಿ ೨೫-೮-೧೯೫೬ರಲ್ಲಿ ಕಾರ್ಕಳದಲ್ಲಿ ಜನಿಸಿದರು.
ಎಳವೆಯಲ್ಲಿಯೇ ಮನೆಯ ಬೆಳಕಾಗಿ, ತಂದೆ ತಾಯ್ಗಳ ಒಲವಾಗಿ; ಬಂಧುಗಳ ಗೆಲುವಾಗಿ, ಬೆಳೆದು ಸಮರ್ಥವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ ಮುಂದೆ ಕನ್ನಡ ಭಾಷೆಯಲ್ಲಿ ಎಂ.ಎ., ಬಿ.ಎಡ್. (ಕನ್ನಡ)ಪದವಿಯನ್ನು ಪಡೆದರು. ೧೯೮೨ರಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆ ಕಡಂದಲೆ ಇಲ್ಲಿ ಅಧ್ಯಾಪಿಕೆಯಾಗಿ ವೃತ್ತಿಯನ್ನು ಆರಂಭಿಸಿದರು.

ಅಲ್ಲಿ ಸೃಷ್ಟಿಶೀಲತೆಯ ಅನುಪಮ ಶಕ್ತಿಯಾಗಿ, ಶಾಲೆಯ ವರ್ಚಸ್ಸಿನ ವಲ್ಲರಿಯಾಗಿ, ಮಾತಿನ ರಸಭಾವಗಳ ಚಿನ್ಮುದವಾಗಿ ಚಿಗುರೊಡೆದು ವಿಕಸಿಸುತ್ತಾ, ಪ್ರತಿಭೆಯಿಂದ, ಪಾಂಡಿತ್ಯದಿಂದ, ಕರ್ತೃತ್ತ್ವ್ವಶಕ್ತಿಯ ಅನಂತ ಸಾಧ್ಯತೆಗಳನ್ನು ಅಭಿವ್ಯಕ್ತಿಸಿ, ಅದ್ಯಾರೂಢ ಜ್ಞಾನ ಸಂಪನ್ನತೆಯಿಂದ ಕೀರ್ತಿಯ ಸ್ವರ್ಣಾದ್ರಿಯಾಗಿ ಮಹಾಚೇತನವಾಗಿ ಅಲ್ಲಿನ ಮುಖ್ಯೋಪಾಧ್ಯಾಯಿನಿಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು.

ಶಾಲಾ ವಾರ್ಷಿಕೋತ್ಸವಗಳಲ್ಲಿ ಮಕ್ಕಳಿಗೆ ನಾಟಕಗಳನ್ನು ನಿರ್ದೇಶಿಸಿ, ಮಕ್ಕಳಿಂದ ಉತ್ತಮ ಪ್ರದರ್ಶನವನ್ನು ಮಾಡಿಸಿ ಜನರ ನುಡಿಮೆಚ್ಚನ್ನು ಗಳಿಸಿದರು. ಅಲ್ಲದೆ ಮಕ್ಕಳಿಗೆ ಯಕ್ಷಗಾನ, ನೃತ್ಯ, ಸಂಗೀತ ತರಬೇತಿಗಳನ್ನು ನೀಡಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಿದ್ಯಾರ್ಥಿಗಳಿಗೆ ಸಂಗೀತ, ನೃತ್ಯ ತರಬೇತಿಯನ್ನು ನೀಡಿ ಅವರು ಅನೇಕ ಸ್ಪರ್ಧೆಗಳಲ್ಲಿ ಬಹಮಾನ ಗಳಿಸಲು ಕಾರಣರಾಗಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು.

ಶಾಸ್ತ್ರೀಯ ಸಂಗೀತ ಕಲೆಯ ಸಿದ್ಧಿಯನ್ನು ಪಡೆದಿದ್ದ ಅವರು ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಪಾಠಗಳನ್ನು ಸಂಗೀತಮಯವಾಗಿಸಿ ವಿದ್ಯಾರ್ಥಿಗಳು ಪಾಠಗಳನ್ನು ಆಸಕ್ತಿಯಿಂದ ಕೇಳುವಂತೆ ಮಾಡಿ ಬೋಧನ ಚಾತುರ್ಯವನ್ನು ಮೆರೆದಿದ್ದರು. ವೃತ್ತಿ ಜೀವನದ ಆರಂಭದಿಂದ ನಿವೃತ್ತಿಯ ಕೊನೆಯ ಕ್ಷಣದವರೆಗೂ ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿ ವಿದ್ಯಾರ್ಥಿಗಳ ಪಾಲಿನ ಆಶಾಕಿರಣವಾಗಿ, ಸಮಾಜದ ಆಸ್ತಿಯಾಗಿ ಹಾಗೂ ಸಹೋದ್ಯೋಗಿಗಳಿಗೆ ನಿರೀಕ್ಷೆಯ ಹೊಂಬೆಳಕಾಗಿ, ಜ್ಞಾನ ಸಮಾರಾಧನೆಯಿಂದ ಶಾಲೆಗೆ ಒಂದು ಮಹೋತ್ಸವವಾಗಿ ಪರಿಣಮಿಸಿದ್ದರು.

ಗರುಡ ಶಿಶುವೊಂದು ಬೆಳೆದು ಗರಿ ಬಲಿತ ಮೇಲೆ ಅಲ್ಪ ದೇಶಗಳನ್ನು ಚರಿಸಿ ತಣಿಯದೆ ವಿಯದ್ ವಿಸ್ತೀರ್ಣವನ್ನೇ ಬಯಸಿ ಆಕಾಶ ಪರ್ಯಟನವನ್ನು ಕೈಗೊಳ್ಳುವಂತೆ ಅವರ ಪ್ರತಿಭೆ ಮತ್ತು ಚಟುವಟಿಕೆಗಳು ಶಾಲೆಗೆ ಮಾತ್ರ ಸೀಮಿತವಾಗದೆ ಸಮಾಜಮುಖಿಯಾಗಿ ಹರಿಯ ತೊಡಗಿತು. ಅನೇಕ ಸಂಘ ಸಂಸ್ಥೆಗಳಲ್ಲಿ ಸೇರಿ ಅಲ್ಲೂ ಸಾರಸ್ವತ ಸಮಾರಾಧನೆಯನ್ನು ನಡೆಸಿ ಸತ್ಕೀರ್ತಿಯನ್ನು ಗಳಿಸಿದರು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ದೇಶಕಿಯಾಗಿ, ತೀರ್ಪುಗಾರರಾಗಿ, ಪ್ರಧಾನ ಭಾಷಣಕಾರರಾಗಿ, ಸ್ಮರಣ ಸಂಚಿಕೆಗಳ ಸಂಪಾದಕಿಯಾಗಿ, ಅಪಾರ ಜನ ಮನ್ನಣೆಯನ್ನು ಪಡೆದಿರುವ ಅವರು ಕಾರ್ಯಕ್ರಮ ನಿರ್ವಹಣೆಯಲ್ಲೂ ನೈಪುಣ್ಯವನ್ನು ಪಡೆದು ಉತ್ತಮ ನಿರೂಪಕಿಯೆನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಯಕ್ಷಗಾನ ಸಂಘಟನೆಗಳಲ್ಲಿ, ನಾಟಕಗಳಲ್ಲಿ ಅನೇಕ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿ ಅಭಿನಯ ಚಾತುರ್ಯದಿಂದ ಮಾಸಲಾಗದ, ಮರೆಯಲಾಗದ, ಕಲಾಶಿಲ್ಪವಾಗಿ, ರಸ ತಲ್ಪವಾಗಿ ಜನ ಮಾನಸದಲ್ಲಿ ಪ್ರತಿಭಾನ್ವಿತರೆನಿದರು. ತುಷಾರ, ತರಂಗ ಸಹಿತ ಕಥಾ ಸ್ಪರ್ಧೆಗಳಲ್ಲಿ ೫ ಬಾರಿ ಬಹುಮಾನ ಗಳಿಕೆ. ವಿವಿಧ ಸಂಘಟನೆಗಳು ನಡೆಸಿದ ತಾಲೂಕು, ಜಿಲ್ಲಾ ಮಟ್ಟದ ಕವನ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ್ದರು. ೬ ಬಾರಿ ಹೋಬಳಿ, ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ, ಗೋಷ್ಠಿಗಳಲ್ಲಿ, ಪ್ರಾರ್ಥನಾ ಕಾರ್‍ಯಕ್ರಮಗಳಲ್ಲಿ ಸ್ಥಾನ ಪಡೆದಿದ್ದರು.

ಜ್ಞಾನ ಮಂಥನದಿಂದ ಸಮುದ್ಭವಿಸಿದ ರಸಚಂದ್ರನಂತಿರುವ ಅವರು ತಮ್ಮ ಜ್ಞಾನ ಕೌಮುದಿಯನ್ನು ಸಾಹಿತ್ಯ ಕ್ಷೇತ್ರದಲ್ಲೂ ಪಸರಿಸಿದ್ದಾರೆ. ಬಾಲ್ಯದಲ್ಲೇ ಬರವಣಿಗೆಯಲ್ಲಿ ತೊಡಗಿಕೊಂಡು ಅನೇಕ ಕಥೆ, ಕವನ, ಲೇಖನಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯವೆಂದರೆ ಬರೀ ಶುಷ್ಕ ಅಕ್ಷರ ಸಮುಚ್ಚಯಗಳಲ್ಲ; ಬದಲಾಗಿ ಅವು ಸತ್ತ್ವಪೂರ್ಣವಾದ ಸಶಕ್ತ ಸಂದೇಶಗಳು! ಅವರ ಕವನ, ಕಥೆ ಹಾಗೂ ಲೇಖನಗಳಲ್ಲಿ ಬೌದ್ಧಿಕ ಸೌಂದರ್ಯ, ತಾತ್ತ್ವಿಕ ಸೌಂದರ್ಯ, ಆದರ್ಶ ಸೌಂದರ್ಯ, ದಾರ್ಶನಿಕ ಸೌಂದರ್ಯಗಳ ಸಮಾಗಮವಿದೆ. ಆ ಬರವಣಿಗೆಯಲ್ಲಿ ಅಭಿಧಾವ್ಯಕ್ತಿಯ ಅಪವ್ಯಯವಿಲ್ಲದ ಅರ್ಥಸೌಂದರ್ಯಗಳ ಸಾಕ್ಷಾತ್ಕಾರವಿದೆ. ಜೀವನಾನುಭವದ ಕಲೆಯಿದೆ, ಶಾಸ್ತ್ರದ ಬೆಡಗು ಬಿನ್ನಣವಿದೆ. ಆದ್ದರಿಂದಲೇ ಅವರ ಕಥೆ, ಕವನ, ಲೇಖನಗಳು ತುಷಾರ, ವನಿತಾ, ತರಂಗ, ಉದಯವಾಣಿ, ಮಂಗಳ, ಕನ್ನಡಪ್ರಭ ಮುಂತಾದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಸಾರಸ್ವತ ಜಗತ್ತಿನ ಪ್ರಶಂಸೆಗೆ ಪಾತ್ರವಾಗಿವೆ. ತಮ್ಮ ಗಾಯತ್ರೀ ಪ್ರಕಾಶನದ ಮೂಲಕ ವಿವಿಧ ಸಾಹಿತಿಗಳ ೧೬೦ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರು ಬರೆದ ೧. ಕಂದನ ಕನಸು(ಶಿಶು ಕಾವ್ಯ) : ಕ.ಸಾ.ಪ.ದ ಜಿ.ಪಿ.ರಾಜರತ್ನಂ ದತ್ತಿ ನಿಧಿ ಪ್ರಶಸ್ತಿ ಪಡೆದಿದೆ. ೨. ಗೌರಿಯ ಗೊಂಬೆ(ಶಿಶು ಕಾವ್ಯ) : ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನನದ ಸಾವಿತ್ರಮ್ಮ ದತ್ತಿ ನಿಧಿ ಬಹುಮಾನ ಪಡೆದಿದೆ. ೩. ಗೊಂಬೆ ತಂದ್ಕೊಡೆ(ಶಿಶು ಕಾವ್ಯ) : ಉದಯವಾಣಿಯ ವರ್ಷದ ಪುಸ್ತಕ ಪ್ರತಿ ವಿಭಾಗದಲ್ಲಿ ಉತ್ತಮ ಕೃತಿ ಎಂದು ಗುರುತಿಸಲ್ಪಟ್ಟಿದೆ. ೪. ಇನ್ನಷ್ಟು ಕವಿತೆಗಳು : ಕವನ ಸಂಕಲನ, ೫. ಗೃಹಿಣೀ ಗೀತ : ಕವನ ಸಂಕಲನಗಳು. ೬. ಹಪ್ಪಳ ಮತ್ತು ಇತರ ಕಥೆಗಳು : ಕಥಾ ಸಂಕಲನ. ಉದಯವಾಣಿಯಲ್ಲಿ ಉದಯೋನ್ಮುಖರ ಕಥಾ ಸಂಕಲನ ವಿಭಾಗದಲ್ಲಿ ಗುರುತಿಸಲ್ಪಟ್ಟಿದೆ ಹೀಗೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಲ್ಲದೆ ೨೦೧೫ರಲ್ಲಿ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಸಾಹಿತ್ಯಕೃಷಿಗಾಗಿ ಸಂಮಾನವನ್ನು ಪಡೆದಿದ್ದರು. ೨೦೨೨ರಲ್ಲಿ ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆಯಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಆಕಾಶವಾಣಿಯಲ್ಲಿ ಹತ್ತು ವರ್ಷಗಳ ಕಾಲ ಬಿಗ್ರೇಡ್ ಕಲಾವಿದೆಯಾಗಿ ಭಾವಗೀತೆ, ಭಕ್ತಿಗೀತೆಗಳನ್ನು ಹಾಡುತ್ತಾ ಗಾನ ಗಂಗೆಯನ್ನು ಹರಿಸಿ ಅವರು ಪ್ರಸಿದ್ಧಿಯನ್ನು ಪಡೆದಿದ್ದರು. ಶಿಕ್ಷಕರಿಗಾಗಿ ನಡೆಸಿದ ರಾಜ್ಯಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದುದ್ದಲ್ಲದೇ ಅವರೇ ಹುಟ್ಟು ಹಾಕಿದ ವಾಗ್ದೇವಿ ಭಜನಾ ಮಂಡಲಿಯೊಂದಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಭಜನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗಳಿಸಿದ್ದಾರೆ.

ಸತ್ಕಾರ್ಯ ಹಾಗೂ ಸದ್ಗುಣದಿಂದ ಎಲ್ಲರ ಗೌರವಕ್ಕೆ ಪಾತ್ರರಾದ ಅವರು ಅಂತರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೇಸಿ ಸಂಸ್ಥೆಗೆ ಸೇರಿ ಅನೇಕ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ ಹಲವು ಪ್ರಶಸ್ತಿ, ರಾಜ್ಯಮಟ್ಟದ ಜೇಸಿ ತರಬೇತುದಾರಳಾಗಿ ಅನೇಕ ತರಬೇತಿ ಕಾರ್‍ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ರಾಜ್ಯಮಟ್ಟದ ಸಮ್ಮೇಳನದಲ್ಲಿ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲೂ ಬಹುಮಾನಗಳನ್ನು ಪಡೆದಿದ್ದಾರೆ.

ಅವರ ಸರ್ವ ಸಾಧನೆಗೆ ಬೆನ್ನಲುಬಾಗಿ ನಿಂತವರು ಅವರ ಪತಿಯಾದ, ಅನಂತ ಪ್ರಕಾಶದ ಸಂಪಾದಕರಾದ ಸಚ್ಚಿದಾನಂದ ಉಡುಪರು. ಸಂಪ್ರೀತಿ ಸೌಂದರ್ಯದಿಂದ ಸದಾ ಆನಂದದಿಂದಿರುವ ಸಾರ್ಥಪೂರ್ಣ ಸುಖಮಯ ಸಂಸಾರ ಅವರದ್ದಾಗಿತ್ತು ; ಸಂಸ್ಕಾರ ಸಂಪನ್ನರಾಗಿ, ಸಾಧನೆಯಲ್ಲಿ , ಸಮಾಜದ ಕಣ್ಬೆಳಕಾಗಿ, ಹೆತ್ತಮನೆಗೂ ಹೊತ್ತ ಮಣ್ಣಿಗೂ ಸೌಖ್ಯ ಸೌಹಾರ್ದದ ಸೌಮೇರುಕಾದ್ರಿಯಾಗಿ ಮಿನುಗುತ್ತಿರುವ ಮಿಥುನ, ರತುನ, ಶಕುನ ಎಂಬ ಮೂರು ಪುತ್ರ ರತ್ನಗಳಿಂದ ಹಾಗೂ ಮುದ್ದಾದ ಮೊಮ್ಮಕ್ಕಳಿಂದ ಕೂಡಿದ ಅವರದ್ದು ತುಂಬು ಸಂಸಾರ. ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುತ್ತಾ ನಗುನಗುತ್ತಾ ಎಲ್ಲರಿಗೂ ಬೇಕಾದವರಾಗಿ, ಸಂಪ್ರೀತಿಯಿಂದ ಬಾಳುತ್ತಿದ್ದರು. ಅವರ ಜೀವನದ ಪ್ರತಿಯೊಂದು ಕೃತಿಯಲ್ಲಿಯೂ ಪರಮಾರ್ಥ ತುಂಬಿ, ಅವರ ಬದುಕು ಸರ್ವ ಸಜ್ಜನಪ್ರಿಯವಾಗಿತ್ತು.

ಇಂತಹ ಮಹಾನ್ ಸಾಧಕಿಯಾದ ಅವರು ಅಗಲುವಿಕೆ ನಮಗೆ ಸಹಿಸಲು ಅಸಾಧ್ಯವಾದ ಧುಃಖಕರ ವಿಷಯವಾಗಿದೆ .ಆದರೆ ಏನು ಮಾಡುವುದು ಎಲ್ಲವೂ ಕಾಲನ ಲೀಲೆ.
ಅಗಲಿದ ಅವರ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲೆಂದು‌ ನಾನು ಪ್ರಾರ್ಥಿಸುತ್ತಿದ್ದೇನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!