ಹೊಸದಿಗಂತ ಡಿಜಿಟಲ್ ಡೆಸ್ಕ್
ಅಬ್ದುಲ್ ಖಾಲಿಕ್ ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಹೋರಾಟಗಾರ. ಅಂಡಮಾನ್ ದ್ವೀಪಸಮೂಹದ ಪೋರ್ಟ್ ಬ್ಲೇರ್‌ನ ಅಬರ್ಡೀನ್ ಬಜಾರ್‌ನಲ್ಲಿ 1921 ರ ಆಗಸ್ಟ್ 26 ರಂದು ಜನಿಸಿದರು. ಶಿಕ್ಷಣದ ನಂತರ ಬ್ರಿಟಿಷ್ ಆಡಳಿತದಡಿಯಲ್ಲಿ ಹವಾಮಾನ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಬಳಿಕ ಸ್ವಾತಂತ್ರ್ಯ ಹೋರಾಟಗಳಲ್ಲಿ ತೊಡಗಿಕೊಂಡ ಖಾಲಿಕ್, ಪೋರ್ಟ್ ಬ್ಲೇರ್‌ನಲ್ಲಿ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಸೇರ್ಪಡೆಯಾದರು. ಸ್ವಾತಂತ್ರ್ಯಕ್ಕಾಗಿ ಶ್ರಮಿಸುತ್ತಿದ್ದ ಸಂಘಟನೆಯ ರಾಜಕೀಯ ಪ್ರಗತಿಗಾಗಿ ಅಪಾರ ಶ್ರಮವಹಿಸಿದರು. ಜೊತೆಗೆ ಸಂಘಟನೆಗೆ ಆರ್ಥಿಕ ಬಲ ದೊರಕಿಸಿಕೊಟ್ಟರು.
ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಜಪಾನಿ ಪಡೆಗಳು ಅಂಡಮಾನ್ ದ್ವೀಪಸಮೂಹವನ್ನು ಆಕ್ರಮಿಸಿಕೊಂಡಾಗ ಖಾಲಿಕ್ ರ ಮೇಲೆ ಬ್ರಿಟಿಷರ ಪರ ಬೇಹುಗಾರಿಕೆ ಆರೋಪ ಹೊರಿಸಿ 1943 ಬಂಧಿಸಲಾಯಿತು. ಜಪಾನಿಯರು ಖಾಲಿಕ್ ರನ್ನು ಸೆಲ್ಯುಲಾರ್ ಜೈಲಿನಲ್ಲಿ ಇರಿಸಿ ಚಿತ್ರಹಿಂಸೆ ನೀಡಿದರು. ಆನಂತರ ಅಬ್ದುಲ್ ಖಾಲಿಕ್ ರನ್ನು ಜಪಾನಿನ ಫೈರಿಂಗ್ ಸ್ಕ್ವಾಡ್ 30 ಮಾರ್ಚ್ 1943 ರಂದು ದುಗ್ನಾಬಾದ್ ತೀರದಲ್ಲಿ ಗುಂಡಿಕ್ಕಿ ಕೊಂದಿತು.