ಸೂಕ್ತ ವ್ಯವಸ್ಥೆ ರೂಪಿಸುವವರೆಗೆ ರಾಜ್ಯಪಾಲರ ಸಂಸ್ಥೆ ರದ್ದುಗೊಳಿಸಿ: ಉದ್ಧವ್​ ಠಾಕ್ರೆ ಆಗ್ರಹ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನ್ಯಾಯಾಧೀಶರ ಮಾದರಿಯಲ್ಲಿ ರಾಜ್ಯಪಾಲರ ಹುದ್ದೆಗೆ ಅರ್ಹ ವ್ಯಕ್ತಿಯನ್ನು ನೇಮಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು. ಅಲ್ಲಿಯವರೆಗೆ ರಾಜ್ಯಪಾಲರ ಸಂಸ್ಥೆಯನ್ನು ರದ್ದುಗೊಳಿಸಬೇಕೆಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.

ಕಳೆದ ವರ್ಷ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನದ ಸಂದರ್ಭ ನಡೆದ ಬೆಳವಣಿಗೆಗಳ ಬಗ್ಗೆ ಗುರುವಾರ ತನ್ನ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್​, ರಾಜ್ಯಪಾಲರಿಗೆ ರಾಜಕೀಯ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸುವ ಅಧಿಕಾರವಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ತಮ್ಮ ಸರ್ಕಾರದ ಬಿಕ್ಕಟ್ಟಿನ ಸಂದರ್ಭ ರಾಜ್ಯಪಾಲರ ಪಾತ್ರ ಮತ್ತು ಅವರು ತೆಗೆದುಕೊಂಡಿದ್ದ ನಿರ್ಧಾರಗಳನ್ನು ಉಲ್ಲೇಖಿಸಿ ಶುಕ್ರವಾರ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಜಕೀಯ ಬಿಕ್ಕಟ್ಟಿನಲ್ಲಿ ಈ ಹಿಂದಿನ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಪಾತ್ರ ಅಸಹ್ಯವಾಗಿತ್ತು. ಇದು ನಿನ್ನೆಯ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಬಹಿರಂಗವಾಗಿದೆ. ರಾಜ್ಯಪಾಲರು ಎಂದು ಹೆಸರಿಸಲಾದ ರಾಜಕೀಯ ಪಕ್ಷಗಳು ಅಥವಾ ಆರ್‌ಎಸ್‌ಎಸ್‌ನಂತಹ ಸಂಘಟನೆಗಳ ಕಾರ್ಯಕರ್ತರ ಪ್ರವೃತ್ತಿಯು ಮಹತ್ವದ ಹುದ್ದೆಯ ಘನತೆಯನ್ನು ಕಡಿಮೆ ಮಾಡುತ್ತಿದೆ ಎಂಬುವುದರಲ್ಲಿ ಯಾವುದೇ ಮಾತಿಲ್ಲ ಎಂದು ಕಿಡಿಕಾರಿದ್ದಾರೆ.

16 ಶಾಸಕರ ಅನರ್ಹತೆ ತೀರ್ಮಾನವಾಗಲಿ
ಏಕನಾಥ್ ಶಿಂಧೆ ಬಣ ಸೇರಿರುವ 16 ಶಾಸಕರ ಅನರ್ಹತೆ ಬಗ್ಗೆ ಸ್ಪೀಕರ್​​ ರಾಹುಲ್​​ ನಾವರ್ಕರ್​ ಬೇಗ ತೀರ್ಮಾನಿಸಬೇಕೆಂದು ಠಾಕ್ರೆ ಆಗ್ರಹಿಸಿದ್ದಾರೆ. ಸುಪ್ರೀಂ ಕೋರ್ಟ್ ನಿನ್ನೆಯ ತನ್ನ ತೀರ್ಪಿನಲ್ಲಿ ಅನರ್ಹತೆ ಕುರಿತು ಸಮಂಜಸವಾದ ಕಾಲಾವಕಾಶ ನೀಡಿದೆ. ಇದರಿಂದ 16 ಶಾಸಕರಿಗೆ ಸಿಕ್ಕಿರುವ ಜೀವದಾನ ತಾತ್ಕಾಲಿಕ ಮತ್ತು ಅದಕ್ಕೆ ಮಿತಿಗಳಿವೆ. ಆದ್ದರಿಂದ ಸ್ಪೀಕರ್​ ತಮ್ಮ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!