ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನ ಪರಿಷತ್‌ನಲ್ಲಿ ನಮಗೆ ಬಹುಮತ ಬಂದ ಕೂಡಲೇ ಬಿಜೆಪಿ ಅವಧಿಯಲ್ಲಿ ಜಾರಿಗೆ ತಂದಿರುವ ಭೂ ಕಂದಾಯ ಕಾಯ್ದೆ ರದ್ದು ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ದೇವರಾಜ್ ಅರಸ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ್ ಅರಸ್ ಅವರು ಉಳುವವನೆ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ತಂದರು. ಆದರೆ ಇವತ್ತು ಉಳುಮೆ ಮಾಡದವನೂ ಭೂಮಿ ಪಡೆಯುತ್ತಿದ್ದಾನೆ ಎಂದು ಅಸಮಾಧಾನ ಹೊರಹಾಕಿದರು.
ಕೃಷಿ ಭೂಮಿಯನ್ನು ಈಗ ಯಾರು ಬೇಕಾದರೂ ಖರೀದಿ ಮಾಡಬಹುದಾಗಿದೆ. ಅದಕ್ಕೆ ಬಿಜೆಪಿಯವರು ನಿಯಮ ಬದಲಾವಣೆ ಮಾಡಿದರು. ನೇಗಿಲು ಹಿಡಿಯದೇ ಇದ್ದವರು ಸಹ ಕೃಷಿ ಭೂಮಿ ಖರೀದಿ ಮಾಡಬಹುದಾಗಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು. ವಿಧಾನ ಪರಿಷತ್‌ನಲ್ಲಿ ನಮಗೆ ಬೆಂಬಲ ಇಲ್ಲ. ವಿಧಾನ ಪರಿಷತ್‌ನಲ್ಲಿ ನಮಗೆ ಬಹುಮತ ಬಂದ ಬಳಿಕ ಈ ನಿಯಮ ಬದಲಾವಣೆ ಮಾಡುತ್ತೇನೆ. ಭೂಕಂದಾಯ ಕಾಯ್ದೆ 79/A/B ನಿಯಮ ರದ್ದು ಮಾಡೇ ಮಾಡುತ್ತೇನೆ ಎಂದು ಘೋಷಿಸಿದರು.