ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಕುಶಾಲನಗರ ಉಪ ತಹಶೀಲ್ದಾರ್!

 ಹೊಸ ದಿಗಂತ ವರದಿ, ಕುಶಾಲನಗರ:

ಜಮೀನಿನ ದುರಸ್ತಿಗಾಗಿ ವ್ಯಕ್ತಿಯೊಬ್ಬರಿಂದ 50 ಸಾವಿರ ರೂ.ಗಳ ಲಂಚ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಿಬ್ಬಂದಿಗಳು ಇಲ್ಲಿನ ಉಪ ತಹಶೀಲ್ದಾರರೊಬ್ಬರನ್ನು ಬಂಧಿಸಿದ್ದಾರೆ.
ಕುಶಾಲನಗರ ತಾಲೂಕು ಕಚೇರಿಯ ಉಪ ತಹಶೀಲ್ದಾರ್ ವಿನೋದ್(ವಿನು) ಎಂಬವರೇ ನಗದಿ ಸಹಿತ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ.
ಕುಶಾಲನಗರ ತಾಲೂಕು ಅಂದಗೋವೆ ಗ್ರಾಮದ ನಿವಾಸಿ‌ ನಂದ ಬೆಳ್ಯಪ್ಪ ಎಂಬವರು. ಅದೇ ಗ್ರಾಮದ ಸರ್ವೆ ನಂಬರ್-177/10ಪಿಗೆ ಸೇರಿದ 3 ಎಕರೆ ಜಮೀನಿನನ್ನು ದುರಸ್ತಿ ಮಾಡಿಕೊಡುವ ಸಂಬಂಧ ಕಳೆದ ಆ.10ರಂದು ಸುಂಟಿಕೊಪ್ಪ ನಾಡಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ಜ.17ರಂದು ಕುಶಾಲನಗರ ತಾಲೂಕು ಕಚೇರಿಯ ಉಪ ತಹಶೀಲ್ದಾರ್ ವಿನು, ನಂದ ಹಾಗೂ ಅವರ ಪತ್ನಿಯನ್ನು ಕಚೇರಿಗೆ ಕರೆಸಿ, ಆ ಜಮೀನನ್ನು ದುರಸ್ತಿ ಮಾಡಿಕೊಡಲು ಹಾಗೂ ಒತ್ತುವರಿಯಾಗಿದ್ದ ಭೂಮಿಯನ್ನು ಮಂಜೂರು ಮಾಡಿಕೊಡಲು ಒಟ್ಟು 14.50ಲಕ್ಷ ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟು, 3.50ಲಕ್ಷ ರೂ. ಮುಂಗಡ ಹಣವನ್ನು ಕೊಡುವಂತೆ ಒತ್ತಾಯಿಸಿದ್ದರೆನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನಂದ ಅವರು ನೀಡಿದ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಎಸಿಬಿ ಅಧಿಕಾರಿ ಮತ್ತು ಸಿಬ್ಬಂದಿಗಳು ದಾಳಿಯ ರೂಪುರೇಷೆ ಸಿದ್ಧಪಡಿಸಿದ್ದರು.
ಬುಧವಾರ ಮಧ್ಯಾಹ್ನ ತಾಲೂಕು ಕಚೇರಿಯ ಆವರಣಕ್ಕೆ ನಂದ ಅವರನ್ನು ಕರೆಸಿಕೊಂಡ ವಿನು ಅವರು, ತಾಲೂಕು ಕಚೇರಿಯ ಆವರಣಕ್ಕೆ ಹೊಂದಿಕೊಂಡಂತಿರುವ ಕ್ಯಾಂಟೀನ್ ಬಳಿ ನಂದ ಅವರಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಕೊಡಗು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು, ಆರೋಪಿಯನ್ನು ಬಂಧಿಸಿ, ಅವರಿಂದ ಲಂಚದ ಹಣವನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!