ಬೆಳಕು ಯೋಜನೆಯಡಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ: ಶಾಸಕ ಅಪ್ಪಚ್ಚು ರಂಜನ್ ಚಾಲನೆ

ಹೊಸ ದಿಗಂತ ವರದಿ, ಕುಶಾಲನಗರ:

ಬಡವರ ಮನೆಗಳಿಗೆ ವಿದ್ಯುತ್ ನೀಡುವ ರಾಜ್ಯ ಸರಕಾರದ ಬೆಳಕು ಯೋಜನೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಚಾಲನೆ ನೀಡಿದರು.
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಂಡೆಬೆಟ್ಟ ಮತ್ತು ಹಾರಂಗಿ ಗ್ರಾಮದ ವಿದ್ಯುತ್ ಸೌಲಭ್ಯವಿಲ್ಲದ, ಬಡತನ ರೇಖೆಯಲ್ಲಿದ್ದ ಬಡವರ ಮನೆಗಳಿಗೆ ಬೆಳಕು ಯೋಜನೆಯಡಿ ವಿದ್ಯುತ್ ಸೌಲಭ್ಯವನ್ನು ಸರಕಾರ ಸೆಸ್ಕ್ ಮೂಲಕ ಒದಗಿಸಲಾಗುತ್ತಿದೆ. ಕೇಂದ್ರ ಸರಕಾರದ ಸೌಭಾಗ್ಯ ಯೋಜನೆ ಅಡಿಯಲ್ಲಿ ಈಗಾಗಲೇ ಹಲವರಿಗೆ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಸರಕಾರದ ವಿವಿಧ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಶಾಸಕರು ತಿಳಿಸಿದರು.
ಸೆಸ್ಕ್ ಕಾರ್ಯಪಾಲಕ ಅಭಿಯಂತರ ಅಶೋಕ್‌ ಅವರು ಯೋಜನೆಯ ಮಾಹಿತಿ ನೀಡಿ, ಈಗಾಗಲೇ ಜಿಲ್ಲೆಯ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಮೂಲಕ ಗುರುತಿಸಲಾದ 4138 ಬಡ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಸೌಭಾಗ್ಯ ಯೋಜನೆಯ ಅಡಿಯಲ್ಲಿ ಈಗಾಗಲೇ ಉಚಿತವಾಗಿ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ಇದೀಗ ರಾಜ್ಯ ಸರ್ಕಾರದ ಹೊಸ ಯೋಜನೆಯ ಅಡಿಯಲ್ಲಿ ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ 471ಮನೆಗಳಿಗೆ ಉಚಿತವಾಗಿ ವಿದ್ಯುತ್ ವ್ಯವಸ್ಥೆ ಮಾಡಲಾಗಿದ್ದು, ಇನ್ನೂ 208 ನೋಂದಾಯಿತ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು. ಇದರ ಜೊತೆಗೆ ಆಯಾ ಗ್ರಾಮದಲ್ಲಿ ವಿದ್ಯುತ್ ಸೌಲಭ್ಯ ಇಲ್ಲದ ಬಡವರು ಸಮೀಪದ ಸೆಸ್ಕ್ ಕೇಂದ್ರದಲ್ಲಿ ಜನವರಿ 30 ರಒಳಗೆ ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದರು.
ಈ ಸಂದರ್ಭ ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಉಪಾಧ್ಯಕ್ಷ ಭಾಸ್ಕರ್ ನಾಯಕ್, ಸದಸ್ಯರಾದ ಕೆ.ಕೆ.ಭೋಗಪ್ಪ, ದಿನೇಶ್, ಗಿರೀಶ್, ಮಣಿ , ಚೈತ್ರಾ, ದೀಪಾಲಕ್ಷ್ಮಿ, ಜಿಲ್ಲಾ ಎಸ್.ಟಿ. ಮೋರ್ಚಾ ಕಾರ್ಯದರ್ಶಿ ಪ್ರಭಾಕರ್, ಜಿಲ್ಲಾ ಎಸ್ ಸಿ ಮೋರ್ಚಾ ಉಪಾಧ್ಯಕ್ಷ ಕುಮಾರ್ ಸ್ವಾಮಿ ತಾ.ಪಂ. ಮಾಜಿ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಾಂಚಿರ ಮನು ನಂಜುಂಡ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಾದ ಮಂಜುನಾಥ, ಪ್ರಮೀಣ್, ‌‌ ಕಿರಿಯ ಇಂಜಿನಿಯರ್ ರಾಣಿ ಸೇರಿದಂತೆ ವಿವಿಧ ಘಟಕ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!