ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಡೀ ಊರಿಗೆ ಊರೇ ಗಣೇಶ ಹಬ್ಬದ ಸಂಭ್ರಮದಲ್ಲಿ ತೇಲುತ್ತಿರುವಾಗಲೇ ಬಾಗಲಕೋಟೆಯಲ್ಲಿ ಅವಘಡವೊಂದು ಸಂಭವಿಸಿದೆ. ಜಿಲ್ಲೆಯ ಹುನಗುಂದ ತಾಲೂಕಿನ ಎಮ್ಮೆಟ್ಟಿ ಗ್ರಾಮದ ಭಕ್ತರು ಕೃಷ್ಣಾ ನದಿಯಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಿ, ಟ್ರ್ಯಾಕ್ಟರ್‌ನಲ್ಲಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ದಾರಿಯ ಮಧ್ಯೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆಯಲ್ಲೇ ಪಲ್ಟಿಯಾಗಿದೆ.
ಬಾಲಕನ ಕೈಗೆ ತೀವ್ರ ಗಾಯ
ಈ ಭೀಕರ ಅವಘಡದಲ್ಲಿ ಟ್ರ್ಯಾಕ್ಟರ್‌ನಲ್ಲಿದ್ದ 11 ಜನರಿಗೆ ಗಾಯಗಳಾಗಿವೆ. ಇವರಲ್ಲಿ ಅನಿಲ್ ದಡ್ಡಿ (15) ಎಂಬ ಅಬಾಲಕನ ಕೈಗೆ ತೀವ್ರ ಪೆಟ್ಟಾಗಿದ್ದು, ಕೈ ಕಟ್ ಆಗಿದೆ. ಇನ್ನು ವಿಜಯಕುಮಾರ್ ನಾಯ್ಕರ್ (25) ಎಂಬ ಯುವಕನ ತಲೆಗೆ ಬಲವಾದ ಏಟು ಬಿದ್ದಿದೆ. ಸದ್ಯ ಇವರಿಬ್ಬರನ್ನೂ ತಕ್ಷಣವೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಉಳಿದ 9 ಜನರಿಗೆ ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹುನಗುಂದ ಠಾಣೆಯಲ್ಲಿ ಪ್ರಕರಣ
ಹಬ್ಬ ಹರಿದಿನಗಳ ಸಂದರ್ಭದಲ್ಲಿ ಇತ್ತೀಚೆಗೆ ವಾಹನ ಸವಾರರ ಸಣ್ಣ ಅಜಾಗರೂಕತೆಯಿಂದಾಗಿ ಅಪಘಾತಗಳು ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಗಾಯಾಳುಗಳ ಸಹಾಯಕ್ಕೆ ಧಾವಿಸಿದ್ದಾರೆ. ಈ ದುರಂತದ ಕುರಿತು ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



