ಹೊಸದಿಗಂತ ವರದಿ ದಾವಣಗೆರೆ:
ಹಿಂದು ಮಹಾಗಣಪತಿ ಬೀಳ್ಕೊಡುಗೆ ಶೋಭಾಯಾತ್ರೆ ಪ್ರಯುಕ್ತ ನಗರದ ಹಳೆ ಪಿ.ಬಿ ರಸ್ತೆಯ ಮಧ್ಯಭಾಗದ ಅಲಂಕಾರಿಕ ವಿದ್ಯುದೀಪಕ್ಕೆ ಬಂಟಿಂಗ್ಸ್ ಕಟ್ಟಲು ಕ್ರೇನ್ ಹತ್ತಿದ್ದ ಯುವಕನೊಬ್ಬ ಮೇಲಿನಿಂದ ಬಿದ್ದು, ಅದೇ ಕ್ರೇನ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ನಗರದ ಬಸವರಾಜ ಪೇಟೆ ವಾಸಿ, ಪ್ಲಂಬರ್ ಕೆಲಸಗಾರ ಪೃಥ್ವಿರಾಜ್(೨೬ ವರ್ಷ) ಮೃತ ದುರ್ದೈವಿ.
ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಬೀಳ್ಕೊಡುಗೆ ಶೋಭಾಯಾತ್ರೆ ಅ.೧೪ರಂದು ನಡೆಯಲಿದ್ದು, ಇದಕ್ಕಾಗಿ ನಗರದ ವಿವಿಧೆಡೆ ಬಾವುಟ, ಬಂಟಿಂಗ್ಸ್ ಕಟ್ಟಲಾಗುತ್ತಿತ್ತು. ಪೃಥ್ವಿರಾಜ್ ಸಹ ಪಿ.ಬಿ ರಸ್ತೆಯ ಬೀರಲಿಂಗೇಶ್ವರ ಮೈದಾನದ ಎದುರು ಬಂಟಿಂಗ್ಸ್ ಕಟ್ಟಲು ಕ್ರೇನ್ ಏರಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ ಕ್ರೇನ್ ಚಕ್ರವು ಆತನ ತಲೆಯ ಮೇಲೆ ಹರಿದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಪೃಥ್ವಿರಾಜ ತನ್ನ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದು, ಪ್ಲಂಬರ್ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಸರೆಯಾಗಿದ್ದ. ಕಳೆದ ೩ ದಿನಗಳಿಂದಲೂ ಬಂಟಿಂಗ್ಸ್ ಕಟ್ಟಲು ಹೋಗುತ್ತಿದ್ದರು. ಇದೀಗ ಅವರನ್ನು ಕಳೆದುಕೊಂಡಿರುವ ಕುಟುಂಬ ಕಂಗಾಲಾಗಿದೆ. ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಕುಟುಂಬಸ್ಥರು, ಸಂಬಂಧಿಗಳ ದುಃಖ ಹೇಳತೀರದಾಗಿತ್ತು. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರೇನ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಅ.೧೨ರಂದು ನಡೆಯಬೇಕಿದ್ದ ಬೃಹತ್ ಬೈಕ್ ರ್‍ಯಾಲಿಯನ್ನು ರದ್ದುಗೊಳಿಸಲು ಸಂಘಟಕರು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ.