ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾಲೆಸ್ಟೀನ್ ಇಸ್ಲಾಮಿಕ್ ಉಗ್ರರ ದಾಳಿ ಹಿನ್ನೆಲೆಯಲ್ಲಿ ಇಸ್ರೇಲ್ ದೇಶದ ಏಜೆನ್ಸಿಯೊಂದರಲ್ಲಿ ಕೇರ್ ಟೇಕರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ಸುರಕ್ಷತೆ ಬಗ್ಗೆ ದಾವಣಗೆರೆಯಲ್ಲಿರುವ ಪತಿ ಹಾಗೂ ಕುಟುಂಬ ವರ್ಗದವರು ಚಿಂತೆಗೀಡಾಗಿದ್ದಾರೆ.
ಕಳೆದೊಂದು ದಶಕದಿಂದಲೂ ಯಹೂದಿಗಳ ನಾಡಿನಲ್ಲಿ ೫೮ ವರ್ಷದ ಹೀಲ್ಡಾ ಮೆಂಥೆರೋ ಎಂಬುವರು ಏಜೆನ್ಸಿಯೊಂದರಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಇಸ್ರೇಲ್‌ನ ಪಿಬೇರ್ ಎಂಬಲ್ಲಿ ವಾಸವಾಗಿದ್ದು, ಉಗ್ರರನ್ನು ಮಟ್ಟ ಹಾಕಲು ಇಸ್ರೇಲ್ ಗಾಜಾ ಮೇಲೆ ತೀವ್ರ ದಾಳಿ ಮುಂದುವರೆಸುತ್ತಿರುವಾಗಲೇ ಹೀಲ್ಡಾ ಮೆಂಥೆರೋ ಕುಟುಂಬ ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಹೀಲ್ಡಾ ಮೆಂಥೆರೋ ದಾವಣಗೆರೆಯ ಲೂರ್ಡ್ಸ್ ಬಾಯ್ಸ್ ಶಾಲೆಯಲ್ಲಿ ೧೫ ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಆಗಸ್ಟ್ ೨೦೧೪ರಲ್ಲಿ ಇಸ್ರೇಲ್‌ಗೆ ತೆರಳಿದ್ದವರು, ಡಿಸೆಂಬರ್ ೨೦೧೬ರಲ್ಲಿ ಮಗನ ಮದುವೆಗೆಂದು ಬಂದಿದ್ದರು. ಜನವರಿ ೨೦೨೨ರಲ್ಲಿ ಇಸ್ರೇಲ್‌ಗೆ ಮರಳಿದ್ದ ಹೀಲ್ಡಾ ಮೆಂಥೆರೋ ನಿತ್ಯವೂ ಮಕ್ಕಳು, ಪತಿ, ಸೊಸೆ ಜೊತೆಗೆ ವಾಟ್ಸಪ್ ಕಾಲ್, ವೀಡಿಯೋ ಕಾಲ್ ಮೂಲಕ ಸಂವಹನ ಮಾಡುತ್ತಿದ್ದರು. ಈಗಲೂ ನಿತ್ಯ ಕುಟುಂಬದೊಂದಿಗೆ ವಾಟ್ಸಪ್ ಕಾಲ್, ವೀಡಿಯೋ ಕಾಲ್ ಮೂಲಕ ಬೆರೆಯುತ್ತಿದ್ದಾರೆ. ಇಸ್ರೇಲ್ ದೇಶದಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದು, ಪ್ರತ್ಯಕ್ಷವಾಗಿ ಕಾಣುತ್ತಿರುವ ದೃಶ್ಯಗಳಿಂದಲೂ ಮಾನಸಿಕವಾಗಿ ಕುಂದಿದ್ದಾರೆ ಎಂದು ಪತಿ ಆಂಬ್ರೋಸ್ ತಿಳಿಸಿದ್ದಾರೆ.
ಆಂಬ್ರೋಸ್ ಹರಿಹರ ತಾಲೂಕು ಮಲ್ಲನಾಯಕನಹಳ್ಳಿ ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸಿ, ಮುಖ್ಯ ಶಿಕ್ಷಕರಾಗಿ ವಯೋನಿವೃತ್ತರಾಗಿದ್ದಾರೆ. ೬೨ ವರ್ಷದ ಆಂಬ್ರೋಸ್ ಸದ್ಯ ದಾವಣಗೆರೆ ಹೊರವಲಯದ ಹೌಸಿಂಗ್ ಬೋರ್ಡ್ ತುಂಗಭದ್ರಾ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಇಸ್ರೇಲ್‌ನಿಂದ ಪತ್ನಿ ಸುರಕ್ಷಿತವಾಗಿ ಭಾರತಕ್ಕೆ ಮರಳೆಂದು ಪ್ರಾರ್ಥಿಸುತ್ತಿದ್ದಾರೆ.